ಬಾಲ್ಯವಿವಾಹಕ್ಕೆ ಸಿದ್ಧತೆ, ಅಧಿಕಾರಿಗಳಿಂದ ತಡೆ

child marriage
Published on

ಗಂಗೊಳ್ಳಿ: ತ್ರಾಸಿ ಗ್ರಾಮದ ಸಭಾಭವನದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ನಿಲ್ಲಿಸಿದ ಘಟನೆ ಗುರುವಾರ ನಡೆದಿದೆ.

ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಮಹಾಗಣಪತಿ ಸಭಾಭವನದಲ್ಲಿ ತಲ್ಲೂರು ಗುಡ್ಡೆಯಂಗಡಿಯ 17ವರ್ಷದ ಬಾಲಕಿಗೆ 28 ವರ್ಷದ ಹುಡುಗನೊಂದಿಗೆ ಮದುವೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡು 200ಕ್ಕೂ ಹೆಚ್ಚು ಮಂದಿ ಮದುವೆ ಹಾಲ್‌ನಲ್ಲಿ ಸೇರಿರುವ ಮಾಹಿತಿ ಮೇರೆಗೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಗಂಗೊಳ್ಳಿ ಪೊಲೀಸ್ ಠಾಣೆ, ತ್ರಾಸಿ ಗ್ರಾಪಂ ಅಧಿಕಾರಿಗಳ ತಂಡ ಮದುವೆ ಹಾಲ್‌ಗೆ ಗುರುವಾರ ಹಠಾತ್ ಭೇಟಿ ನೀಡಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ತಡೆದಿದ್ದಾರೆ.

ಕುಟುಂಬದ ಎರಡೂ ಕಡೆಯವರಿಗೂ ಬಾಲ್ಯವಿಹಾಹ ನಿಷೇಧ ಮತ್ತು ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ಅರಿವು ಮೂಡಿಸಿದ ಅಧಿಕಾರಿಗಳು, ಕುಟುಂಬಿಕರಿಂದ ಮತ್ತು ಹಾಲ್ ಮಾಲೀಕರು ಮತ್ತು ಪುರೋಹಿತರಿಂದ ಮುಚ್ಚಳಿಕೆ ಬರೆಸಿಕೊಂಡರು. ಇದರಿಂದ ಕಲ್ಯಾಣ ಮಂಟಪದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿ ಮೌನ ಆವರಿಸಿತು. ಮದುವೆ ನಿಂತು ಹೋಗಿರುವುದರಿಂದ ಮದುವೆಗೆ ಬಂದವರೆಲ್ಲಾ ತಬ್ಬಿಬ್ಬಾಗಿ ವಾಪಸಾದರು.

ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ, ತ್ರಾಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೋಭಾ, ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ ಶೆಡ್ತಿ, ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ರಘುರಾಮ, ಹೆಡ್ ಕಾನ್ಸ್‌ಟೆಬಲ್ ಮೋಹನ ಪೂಜಾರಿ, ರೂಪಾ, ರಕ್ಷಣಾಧಿಕಾರಿ ಕಪಿಲ, ಸಮಾಜ ಕಾರ್ಯಕರ್ತೆ ಸುರಕ್ಷಾ, ಅಂಗನವಾಡಿ ಕಾರ್ಯಕರ್ತೆ ಜಯಮಾಲಾ, ತ್ರಾಸಿ ಗ್ರಾಪಂ ಸಿಬ್ಬಂದಿ ಶಿವಾನಂದ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net