ಗಂಭೀರತೆ ಪಡೆದ ಬಾಲ್ಯವಿವಾಹ

14_12_Mdy_05(Child Mothers Story)..
Published on

ನಾಗಮಂಗಲ: ಜಿಲ್ಲೆಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯಾಗಿರುವುದು ಅಂಕಿ-ಅಂಶದ ಸಹಿತ ಹೊರಬೀಳುತ್ತಿದ್ದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸದನದಲ್ಲಿ ಚರ್ಚೆ ನಡೆಸಿರುವುದರಿಂದ ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಪರಿಣಾಮ ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಭ್ರೂಣ ಲಿಂಗ ಸ್ಕಾೃನಿಂಗ್ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಿಂದಾಗಿ ಜಿಲ್ಲೆ ದೇಶದಲ್ಲಿಯೇ ತಲೆತಗ್ಗಿಸುವಂತಾಗಿದೆ. ಈ ನಡುವೆ ಬಾಲ್ಯವಿವಾಹಕ್ಕೊಳಗಾಗಿ ಅಪ್ರಾಪ್ತೆಯರು ಗರ್ಭಿಣಿಯಾದ ಪ್ರಕರಣವೂ ಹೊರಬಿದ್ದಿರುವುದು ಇನ್ನಷ್ಟು ಮುಜುಗರ ತಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ತುರ್ತು ಕ್ರಮಕ್ಕೆ ಮುಂದಾಗಿದೆ.

77 ರಿಂದ 17,400ರವರೆಗೆ: ನ.18ರಂದು ತಾಲೂಕಿನಲ್ಲಿ ನಡೆದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯಾಗಿರುವ ವಿಷಯ ಚರ್ಚೆಗೆ ಬಂದಿತ್ತು. ತಾಲೂಕಿನಲ್ಲಿ 77 ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆನ್ನುವ ಮಾಹಿತಿ ಕೇಳಿ ಆಯೋಗದ ಸದಸ್ಯರು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ‘ವಿಜಯವಾಣಿ’ ವಿಸ್ತೃತ ವರದಿ ಪ್ರಕಟಿಸಿತ್ತು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರಕಟವಾಗಿ ಸುದ್ದಿ ಸಂಚಲನ ಸೃಷ್ಟಿಸಿತು.
ಈ ಹಿನ್ನೆಲೆಯಲ್ಲಿ ಗಮನಿಸಿದ ಎಂಎಲ್‌ಸಿ ಮಧು ಜಿ.ಮಾದೇಗೌಡ, ಅಪ್ರಾಪ್ತೆ ಗರ್ಭಿಣಿಯರ ಮಾಹಿತಿಯನ್ನು ನೀಡುವಂತೆ ಆರೋಗ್ಯ ಸಚಿವರಿಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಅಧಿವೇಶನದಲ್ಲಿ ಲಿಖಿತ ಉತ್ತರ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ 17,400 ಬಾಲ ತಾಯಂದಿರು ಪತ್ತೆಯಾಗಿದ್ದಾರೆ. 2018ರಲ್ಲಿ 4,814 ಮತ್ತು 2019ರಲ್ಲಿ 2,420, 2020ರಲ್ಲಿ 1,772, 2021ರಲ್ಲಿ 2,339, 2022ರಲ್ಲಿ 6,055 ಜನ ಬಾಲ ತಾಯಂದಿರನ್ನು ಪತ್ತೆ ಮಾಡಲಾಗಿದೆ ಎಂದಿದ್ದರು.

ಬಾಲತಾಯಂದಿರ ಸಂಖ್ಯೆ ಹೆಚ್ಚಾಗಲು ಬಾಲ್ಯವಿವಾಹ, ಅನಕ್ಷರತೆ ಮತ್ತು ಬಡತನ, ವಲಸೆ ಹೋಗುವ ಪ್ರವೃತ್ತಿ, ಸಾಮಾಜಿಕ ಅಭದ್ರತೆ, ಕುಟುಂಬ ಕಲ್ಯಾಣ ವಿಧಾನಗಳ ಅರಿವಿಲ್ಲದಿರುವುದು ಹಾಗೂ ಹುಡುಗಿಯರ ಅಭಿಪ್ರಾಯಕ್ಕೆ ಮನ್ನಣೆ ನೀಡದಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದಲ್ಲದೆ ಮಕ್ಕಳ ಕಲ್ಯಾಣ ಸಮಿತಿ ಎದುರು ಐದು ವರ್ಷದಲ್ಲಿ 366 ಪ್ರಕರಣದ ವಿಚಾರಣೆ ನಡೆದು 55 ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡ ಅಲರ್ಟ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net