

ಮಂಡ್ಯ: ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಿಂದಾಗಿ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆ ತಲೆತಗ್ಗಿಸುವಂತಾಗಿರುವುದರ ಬೆನ್ನಲ್ಲೇ ಹೆಚ್ಚು ಬಾಲ್ಯವಿವಾಹ ನಡೆದಿರುವ ಕುಖ್ಯಾತಿ ಹೊಂದಿದೆ. ಬೆಳಗಾವಿ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಮಾಹಿತಿ ಆತಂಕ ಸೃಷ್ಟಿಸಿದೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವೆ, ಕಳೆದ ಮೂರು ವರ್ಷದ ಅಂಕಿಅಂಶದೊಂದಿಗೆ ವಿವರಣೆ ನೀಡಿದ್ದಾರೆ. ಅದರಂತೆ 2020-21ರಲ್ಲಿ 34, 2021-22ರಲ್ಲಿ 76 ಹಾಗೂ 2022-23ರಲ್ಲಿ 62 ಬಾಲ್ಯವಿವಾಹ ಪ್ರಕರಣ ದಾಖಲಾಗಿದೆ. 2022-23ರಲ್ಲಿ ಗಮನಿಸಿದರೆ ಮಂಡ್ಯ ಬಳಿಕ ಶಿವಮೊಗ್ಗದಲ್ಲಿ 51, ಮೈಸೂರಿನಲ್ಲಿ 36, ಬೆಂಗಳೂರು ಗ್ರಾಮಾಂತರದಲ್ಲಿ 28 ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 1,042 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. 2020-21ರಲ್ಲಿ 296, 2021-22ರಲ್ಲಿ 418 ಹಾಗೂ 2022-23ರಲ್ಲಿ 328 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ರಾಜ್ಯದಲ್ಲಿ ಬಾಲ್ಯವಿವಾಹ ನಿಷೇದಾಧಿಕಾರಿಗಳ ಅಂದಾಜು ಸಂಖ್ಯೆ 59,000 ರಷ್ಟಿದೆ. ರಾಜ್ಯ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯವಿವಾಹ ನಿಷೇದಾಧಿಕಾರಿಗಳೆಂದು ಗುರುತಿಸಲಾಗಿದೆ ಎಂದಿದ್ದಾರೆ.
ಇನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಅನ್ವಯ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹದಲ್ಲಿ ಬಾಲಕಿಯರ ಪ್ರಮಾಣ ಶೇ 24.7ರಷ್ಟಿದ್ದರೆ, ಬಾಲಕರ ಪ್ರಮಾಣ ಶೇ 7.2ರಷ್ಟಿದೆ. ಅಂತೆಯೇ ಪಟ್ಟಣ/ನಗರ ಪ್ರದೇಶದಲ್ಲಿ ಬಾಲ್ಯವಿವಾಹದಲ್ಲಿ ಬಾಲಕಿಯರ ಪ್ರಮಾಣ ಶೇ 16.1ರಷ್ಟಿದ್ದರೆ, ಬಾಲಕರ ಪ್ರಮಾಣ ಶೇ 4.5ರಷ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು 2019-20ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆ-5 ಅನ್ವಯ ಈ ಮಾಹಿತಿ ಬೆಳಕಿಗೆ ಬಂದಿದೆ. ಬಡತನ, ಅಜ್ಞಾನ, ಮೂಢನಂಬಿಕೆ, ಅರಿವಿನ ಕೊರತೆ, ಅನಕ್ಷರತೆ ಸೇರಿದಂತೆ ಹೆಚ್ಚಿನ ಕಾರಣಗಳಿಗಾಗಿ ಬಾಲ್ಯವಿವಾಹಗಳು ಗೌಪ್ಯವಾಗಿ ನಡೆಯುತ್ತಿದೆ. ಪ್ರಕರಣಗಳು ನಂತರ ಬೆಳಕಿಗೆ ಬರುತ್ತಿವೆ. ಬಾಲ್ಯವಿವಾಹಗಳನ್ನು ಸಂಪೂರ್ಣ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.