ಅರಿವು ಮೂಡಿಸಿದರೂ ನಿಲ್ಲದ ಬಾಲ್ಯವಿವಾಹ: ಉಪನಿರ್ದೇಶಕ ಆರ್.ನಾಗರಾಜ್ ಬೇಸರ

31_01_Mdy_02(Child Marriage)
Published on

ಮಂಡ್ಯ: ಎಷ್ಟೇ ಅರಿವು ಮೂಡಿಸುತ್ತಿದ್ದರೂ ಹಾಗೂ ಕ್ರಮ ಕೈಗೊಳ್ಳುತ್ತಿದ್ದರೂ ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ್ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಡ್ಯ ತಾಲೂಕು ಸಹಯೋಗದಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕುರಿತು ಇಲಾಖೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಾಲ್ಯವಿವಾಹ ತಡೆಗಟ್ಟಲು ಒಂದೇ ಇಲಾಖೆಯಿಂದ ಸಾಧ್ಯವಿಲ್ಲ. ಆದ್ದರಿಂದ ಬಾಲ್ಯವಿವಾಹ ನಿಷೇಧ ಕುರಿತ ಭಾಗಿದಾರ ಇಲಾಖೆಗಳ ಸಹಕಾರವೂ ಅಗತ್ಯವಿದೆ. ಎಲ್ಲರೂ ಸಹಭಾಗಿತ್ವದಿಂದ ಮಂಡ್ಯವನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ಸಂಕಲ್ಪ ಮಾಡೋಣ ಎಂದು ನುಡಿದರು.

ಬಾಲ್ಯ ವಿವಾಹ ಮಾಡುವವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗಿದೆ. ಎಫ್‌ಐಆರ್ ಹಾಕಲಾಗಿದೆ. ಇದೀಗ ವಿಧಾನಸಭಾ ಚುನಾವಣೆ ಬರುತ್ತಿದೆ. ಎಲ್ಲರೂ ಅತ್ತಕಡೆ ಗಮನವಿರುತ್ತದೆಂದು ಜನರು ಬಾಲ್ಯವಿವಾಹ ನಡೆಸಲು ಮುಂದಾಗುತ್ತಾರೆ ಎಂದು ಎಚ್ಚರಿಸಿದ ಅವರು, ಕಾರ್ಯಾಗಾರದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ. ಎಲ್ಲರ ಸಹಭಾಗಿತ್ವದಲ್ಲಿ ಬಾಲ್ಯವಿವಾಹ ಮುಕ್ತ ಜಿಲ್ಲೆ ಮಾಡೋಣ ಎಂದು ಹೇಳಿದರು.

ಮದ್ದೂರು ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಲಕ್ಷ್ಮೀ ಪ್ರಸನ್ನ, ಸರಸ್ವತಿ, ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕ ದೇವರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರಸ್ವಾಮಿ, ದುದ್ದ ಹೋಬಳಿ ಶಿಶು ಅಭಿವೃದ್ಧಿ ಅಧಿಕಾರಿ ಯೋಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net