

ಶಿಕಾರಿಪುರ: ಬಾಲ್ಯವಿವಾಹ ಪದ್ಧತಿ ಮೌಢ್ಯದ ಪರಮಾವಧಿ. ಸಮಾಜಕ್ಕೆ ಮಾರಕವಾದಂತಹ ಸಂಸ್ಕೃತಿ. ನಾವು ಇದನ್ನು ವಿರೋಧಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂರಕ್ಷಣಾಧಿಕಾರಿ ಜಿ.ರತ್ನಮ್ಮ ಹೇಳಿದರು.
ಗುರುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಸೇವಾ ವಿಭಾಗ, ಎನ್‌ಎಸ್‌ಎಸ್ ಮತ್ತು ಸಮಾಜಕಾರ್ಯ ವಿಭಾಗ ಆಯೋಜಿಸಿದ್ದ ಬಾಲ್ಯ ವಿವಾಹ ಮತ್ತು ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಸರ್ಕಾರ ಇಷ್ಟೊಂದು ಅರಿವು ಮೂಡಿಸುತ್ತಿದ್ದರೂ ಗೊತ್ತಾಗದಂತೆ ಅಲ್ಲೊಂದು ಇಲ್ಲೊಂದು ಬಾಲ್ಯವಿವಾಹಗಳು ನಡೆಯುತ್ತಿರುತ್ತವೆ. ಇದರಿಂದ ವಿವಾಹವಾಗುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ವಿವಾಹಕ್ಕೆ ಒಂದು ಹಂತದ ಸಮಯ ಬೇಕು. ಅದರ ಕನಿಷ್ಠ ಮಾಹಿತಿಯೂ ಇಲ್ಲದೇ ಸಂಪ್ರದಾಯದ ಹೆಸರಿನಲ್ಲಿ ನಡೆದು ಹೋಗುತ್ತವೆ. ಇದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಶಕಗಳಿಂದಲೂ ಸರ್ಕಾರ ಮತ್ತು ಸಾಮಾಜಿಕ ಸಂಘಟನೆಗಳು ಅರಿವು ಮೂಡಿಸುತ್ತಲೇ ಇವೆ. ಕಾನೂನು ಕೂಡ ಬಿಗಿಯಾಗಿದೆ. ಆದರೆ ಇದನ್ನೂ ಮೀರಿ ಬಾಲ್ಯ ವಿವಾಹಗಳನ್ನು ಮಾಡುವವರಿದ್ದಾರೆ. ನಿಮ್ಮ ಗಮನಕ್ಕೆ ಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕೆಲವು ಸಲ ಮಾಹಿತಿ ಕೊರತೆಯಿಂದ ತಲೆ ತಲಾಂತರಗಳಿಂದ ಬಂದ ಆಚರಣೆಯಿಂದ ಇಂತಹ ಪ್ರಮಾದಗಳು ನಡೆದುಹೋಗುತ್ತಿವೆ. ಇಂತಹ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕಾಲೇಜಿನಿಂದ ಆಯೋಜಿಸಿರುವುದು ಅತ್ಯಂತ ಸೂಕ್ತವಾಗಿದೆ. ಹಳ್ಳಿಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬಾಲ್ಯವಿವಾಹಗಳಿಂದಾಗುವ ತೊಂದರೆಗಳ ಅರಿವು ಮೂಡಿಸಬೇಕು ಎಂದರು.
ಪ್ರಾಚಾರ್ಯ ಪ್ರೊ. ಶೇಖರ್, ಡಾ. ರಾಕೇಶ್ ಪಟ್ಟಣ, ಡಾ. ಪಾಂಡುರಂಗ, ಬಿ.ವಿ.ಸೌಮ್ಯಾ, ಡಾ. ಅಜಯ್ ಕುಮಾರ್, ಆರ್.ಕೆ.ವಿನಯ್, ಕೆ.ಸುನಿಲ್ ಕುಮಾರ್, ಸುಧೀರ್, ವಿನಯ್, ಸದಾಶಿವಪ್ಪ ಇತರರಿದ್ದರು.