ಸಾಮಾಜಿಕ ಪಿಡುಗಾಗಿದೆ ಬಾಲ್ಯವಿವಾಹ

23 SARAG 2 (2)
Published on

ಸರಗೂರು: ಬಾಲ್ಯ ವಿವಾಹ ನಿಷೇಧವನ್ನು ಸಂಪೂರ್ಣವಾಗಿ ಜಾರಿಗೆ ತರಲು ಜನರಿಗೆ ಕಾಯ್ದೆಯ ಬಗ್ಗೆ ಮನವವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಹಳಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರಂಗನಾಥ್ ತಿಳಿಸಿದರು.

ತಾಲೂಕಿನ ಹಂಚಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಬಾಲ್ಯ ವಿವಾಹವೂ ವೈಯಕ್ತಿಕವಾಗಿ ಹೆಣ್ಣು, ಗಂಡಿನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುವುದಲ್ಲದೆ ಸಾಮಾಜಿಕ ಆರೋಗ್ಯವನ್ನು ಹಾಳು ಮಾಡುವ ಒಂದು ಪಿಡುಗು ಎಂದು ತಿಳಿಸಿದರು.

ಬಾಲ್ಯ ವಿವಾಹವು ಮಕ್ಕಳ ಪ್ರಗತಿಗೆ ಮಾರಕವಾಗಿದ್ದು, ಮಕ್ಕಳ ಶಿಕ್ಷಣ ಹಕ್ಕು, ಭಾಗವಹಿಸುವ ಹಕ್ಕು, ಅಭಿವೃದ್ಧಿಯ ಹಕ್ಕಿನಿಂದ ವಂಚಿತರಾಗಿ ತಮ್ಮ ಜೀವನದ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಂಬಂಧಪಟ್ಟ ಅಧಿಕಾರ ವರ್ಗ ತಮ್ಮ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ವ್ಯಾಪಕವಾಗಿ ಸಾಮಾಜಿಕ ಜಾಗೃತಿ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ಬಾಲ್ಯವಿವಾಹ ಆಗುವುದರಿಂದ ಅನೇಕ ಯುವಕರು ಹದಿಹರೆಯದಲ್ಲಿಯೇ ಜೈಲುಪಾಲಾಗಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಬಾಲ್ಯವಿವಾಹದ ಅನನುಕೂಲಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿಸಿಕೊಡಬೇಕು. ಸಮಿತಿಗಳು ಗ್ರಾಮ ಮಟ್ಟದಿಂದಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತಪ್ಪಿಸಬಹುದು ಎಂದು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕರಾದ ಎಸ್.ವಿ.ಸುಬ್ಬರಾವ್ ಮಾತನಾಡಿ, ಇತ್ತೀಚೆಗೆ ವಿವಿಧ ಪ್ರಭಾವಗಳಿಂದ ಬಾಲ್ಯವಿವಾಹ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹದ ನಿಷೇಧದ ಕುರಿತು ಪ್ರತಿಜ್ಞೆ ಮಾಡಿಸಿದ ಅವರು ಬಾಲ್ಯವಿವಾಹದಿಂದ ಉಂಟಾಗುವ ತೊಂದರೆಗಳು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಕಿರುಚಿತ್ರ, ನಾಟಕದ ಮೂಲಕ ಪ್ರದರ್ಶಿಸಿದರು.

ಹಿರಿಯ ಶಿಕ್ಷಕ ಅನಿಲ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಸ್ವಾಮಿಗೌಡ, ಮೂರ್ತಿ, ಶಿಕ್ಷಕರು ಹಾಗೂ ಪಾಲಕರು ಮತ್ತು ಎಸ್‌ಡಿಎಂಸಿ ಸದಸ್ಯರು ಶಾಲಾ ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net