

ಹುಣಸೂರು: ಬಾಲ್ಯವಿವಾಹದ ಅನಾಹುತಗಳಿಗೆ ಪಾಲಕರು ಮತ್ತು ಸಮಾಜವೇ ಹೊಣೆ ಎಂದು ವಕೀಲೆ ಆರ್.ಎಸ್.ಪವಿತ್ರಾ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಸಂತ ಜೋಸೆಫರ ಪಿಯು ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ಮತ್ತು ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನ ಕುರಿತ ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾರೀರಿಕವಾಗಿ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಹೊಂದಿರದ ವಯಸ್ಸಿನಲ್ಲಿ ತಮ್ಮ ಸಾಮಾಜಿಕ ಹೊಣೆಗಾರಿಕೆ ಮರೆತು ಪಾಲಕರು ಕದ್ದುಮುಚ್ಚಿ ಮಕ್ಕಳನ್ನು ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ. ಅಂತೆಯೇ ವಿದ್ಯಾರ್ಥಿಗಳು ಕೂಡ ಪ್ರೀತಿ ಪ್ರೇಮದ ಹೆಸರಿನಲ್ಲಿ ಭವಿಷ್ಯ ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಬಾಲ್ಯವಿವಾಹ ಕೇವಲ ಕುಟುಂಬಕ್ಕೆ ಸಂಕಷ್ಟ ತರುವುದು ಮಾತ್ರವಲ್ಲ ಸಮುದಾಯದಲ್ಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರಗಳು ಹೆಣ್ಣುಮಕ್ಕಳು 18 ವರ್ಷದ ನಂತರ ಮತ್ತು ಗಂಡುಮಕ್ಕಳು 21 ವರ್ಷದ ನಂತರ ವಿವಾಹವಾಗಲು ಯೋಗ್ಯರೆಂದು ಘೋಷಿಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಕೀಲರ ಸಂಘದ ಅಧ್ಯಕ್ಷ ಯೋಗಣ್ಣೇಗೌಡ ಮಾತನಾಡಿ, ವಿಶ್ವವನ್ನೇ ಕಾಡಿದ ಕೋವಿಡ್ ಸಂಕಷ್ಟದ ಸಮಯದಲ್ಲೂ ಪಾಲಕರು ಮುಂಜಾನೆ ಹೊತ್ತಿನಲ್ಲಿ ಬಾಲ್ಯವಿವಾಹ ಮಾಡಿರುವ ಪ್ರಕರಣಗಳನ್ನು ಕಂಡಿದ್ದೇವೆ. ಇದರಿಂದ ಅವರು ಸಾಧಿಸಿದ್ದು ಏನೂ ಇಲ್ಲ. ಬದಲಾಗಿ ಮಕ್ಕಳ ಭವಿಷ್ಯವನ್ನು ತಮ್ಮ ಕೈಯಾರೆ ಹಾಳು ಮಾಡಿದರು ಎನ್ನುವುದನ್ನು ಅರಿಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಬಿ.ಸಿ.ಸುಂದರೇಶ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.