

ರಾಮನಗರ : ಸರ್ಕಾರದ ಹಲವಾರು ಕ್ರಮಗಳ ಹೊರತಾಗಿಯೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇದ್ದು, ಲಾಕ್‌ಡೌನ್ ಲಾಭ ಪಡೆದು ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ 3 ವಿವಾಹಗಳು ನಡೆದು ಹೋಗಿವೆ.
ಕರೊನಾ ಅದ್ದೂರಿ ಮದುವೆಗಳಿಗೆ ತಡೆ ಹಾಕಿದೆ. ಎಲ್ಲವೂ ಅತಿ ಸರಳವಾಗಿ ನಡೆದೇ ಹೋಗುತ್ತಿವೆ. ಇದರ ಜತೆಗೆ ಸದ್ದಿಲ್ಲದೆ ಅಪ್ರಾಪ್ತರ ಮದುವೆಗಳೂ ನಡೆಯುತ್ತಿದ್ದು, ಅದೆಷ್ಟೋ ಮದುವೆಗಳು ಬೆಳಕಿಗೆ ಬಾರದಾಗಿವೆ. ಕರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಮದುವೆ ಮಾಡುವಂತಿಲ್ಲ ಎಂದು ಸರ್ಕಾರ ನಿರ್ದೇಶನ ನೀಡಿದ ನಂತರ, ಬಹುತೇಕ ಮದುವೆಗಳು ದೇವಾಲಯದ ಅಂಗಳ, ಇಲ್ಲವೇ ಮನೆಯಂಗಳದಲ್ಲೇ ನಡೆಯುತ್ತಿವೆ. ಇಂತಹ ಅವಕಾಶ ಬಳಸಿಕೊಂಡು ಜಿಲ್ಲೆಯಲ್ಲಿ ಬಾಲ್ಯವಿವಾಹಗಳೂ ನಡೆದಿವೆ. ಇವುಗಳ ಪಟ್ಟಿಗೆ ಈಗ ಮತ್ತೆ ಮೂರು ಪ್ರಕರಣಗಳು ಸೇರ್ಪಡೆಯಾಗಿವೆ.
ಲಾಕ್‌ಡೌನ್ ಸಂದರ್ಭದಲ್ಲಿ ಅಪ್ರಾಪ್ತರಿಗೆ ಮದುವೆ ಮಾಡುತ್ತಿರುವ ಸಂಬಂಧ ಮಕ್ಕಳ ಸಹಾಯವಾಣಿಗೆ ಸಾಕಷ್ಟು ದೂರುಗಳು ಬಂದಿವೆ. ಇವುಗಳ ಬೆನ್ನು ಹತ್ತಿದ ಅಧಿಕಾರಿಗಳು ಮೂರು ಮದುವೆಗಳನ್ನು ತಡೆಯುವಲ್ಲಿ ಸಲರಾಗಿದ್ದು, ಮೂವರು ಬಾಲಕಿಯರು ಸಂಸಾರದ ನೊಗ ಹೊರುವ ಬಂಧನಕ್ಕೆ ಒಳಗಾಗಿದ್ದಾರೆ. ಬೆಳಕಿಗೆ ಬಂದ ಮೂರು ಪ್ರಕರಣಗಳಲ್ಲಿಯೂ ಪಾಲಕರು ಮತ್ತು ಮದುವೆಗೆ ಕಾರಣವಾದವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಗುಟ್ಟು ಗೊತ್ತಾಗುತ್ತಿಲ್ಲ : ಬಹುತೇಕ ಮದುವೆಗಳು ಗುಟ್ಟಾಗಿಯೇ ನಡೆದಿರುವುದು ಅಧಿಕಾರಿಗಳ ಚಿಂತೆ ಹೆಚ್ಚುವಂತೆ ಮಾಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಈ ವಿವಾಹಗಳು ನಡೆದಿರುವುದರಿಂದ, ಆಹ್ವಾನ ಪತ್ರಿಕೆ ಸೇರಿ ಯಾವುದೇ ಸಾಕ್ಷ್ಯಗಳು ಲಭ್ಯವಾಗುತ್ತಿಲ್ಲ. ಅಲ್ಲದೆ, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಮದುವೆ ಆದರೆ ಸಾಕ್ಷ್ಯಗಳು ಲಭ್ಯವಾಗುತ್ತಿದ್ದವು. ಒಂದು ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದರೂ ಜನರು ಮದುವೆ ನಡೆದೇ ಇಲ್ಲ ಎನ್ನುವಂತೆ ಸಿಬ್ಬಂದಿ ಮೇಲೆ ವಾಗ್ಯುದ್ಧ ನಡೆಸಿದ ಘಟನೆಗಳೂ ನಡೆದಿವೆ. ಇದರ ಹೊರತಾಗಿಯೂ ಮದುವೆ ನಡೆದಿರುವುದಕ್ಕೆ ಸಾಕ್ಷ್ಯಗಳು ಸಿಕ್ಕರೆ ಖಂಡಿತವಾಗಿ ಪ್ರಕರಣ ದಾಖಲು ಮಾಡಲಾಗುವುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಸುಳ್ಳು ಮಾಹಿತಿ : ಮತ್ತೊಂದೆಡೆ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸವೂ ಸಾರ್ವಜನಿಕರಿಂದ ಆಗುತ್ತಿದೆ. ಕಳೆದ ತಿಂಗಳಲ್ಲಿ ಬಂದ ಕರೆಗಳಲ್ಲಿ 4-5 ಕರೆಗಳು ಹುಸಿಯಾಗಿವೆ. ಮಾಹಿತಿ ಬರುತ್ತಿದ್ದಂತೆ ಅಧಿಕಾರಿಗಳು ಪೊಲೀಸರೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರೆ ಅಲ್ಲಿ ಮದುವೆ ನಡೆಯದೇ ಇರುವುದು ಕಂಡು ಬಂದಿದೆ. ಜತೆಗೆ, ಮದುವೆ ಆಗಿದ್ದರೂ ಪ್ರಾಪ್ತ ವಯಸ್ಸಿಗೆ ಮದುವೆ ಮಾಡಿರುವುದೂ ಕಂಡು ಬಂದಿದೆ ಎನ್ನುತ್ತಾರೆ ಅಧಿಕಾರಿಗಳು.
ಪಾಲಕರೇ ಹುಷಾರ್ : ಮದುವೆ ಮಾಡಿಬಿಟ್ಟರೆ ಜವಾಬ್ದಾರಿ ಮುಗಿಯಿತು, ಇಲ್ಲ ಒಳ್ಳೆಯ ಕಡೆ ಸಂಬಂಧ ಬಂದಿದೆ ಅಥವಾ ಇನ್ನಾವುದೋ ಒತ್ತಡಕ್ಕೆ ಮಣಿದು 18 ವರ್ಷ ಮೀರದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದು ಅಪರಾಧವಾಗಿದ್ದು, ಇದಕ್ಕೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಎಚ್ಚರ ವಹಿಸುವುದು ಅಗತ್ಯವಾಗಿದೆ.
ಮಕ್ಕಳ ಮೇಲಿರಲಿ ನಿಗಾ : ಲಾಕ್‌ಡೌನ್ ಸಮಯದಲ್ಲಿ ಪಾಲಕರು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೆಲಸ ಮುಗಿಯಿತು ಎನ್ನದೆ, ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ನಿಗಾ ಇರಿಸಿ. ಕಾರಣ ಹದಿ ಹರೆಯದಲ್ಲಿ ದಾರಿ ತಪ್ಪುವ ಸಾಧ್ಯತೆ ಇದೆ. ಇದಕ್ಕೆ ಉದಾಹರಣೆ ಎನ್ನುವಂತೆ ರಾಮನಗರದ ಪ್ರತಿಷ್ಠಿತ ಶಾಲೆಯ 45 ವರ್ಷದ ಶಿಕ್ಷಕನೊಬ್ಬ ತನ್ನದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೇಮ ಪಾಶಕ್ಕೆ ಬೀಳಿಸಿದ್ದಾನೆ. ಶಿಕ್ಷಕನ ಪತ್ನಿ, ತನ್ನ ಪತಿ ಯಾರೊಂದಿಗೆ ಮೊಬೈಲ್ ಚಾಟ್ ಮಾಡುತ್ತಿದ್ದಾನೆ ಎನ್ನುವುದನ್ನು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ಠಾಣೆ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳ ಚಟುವಟಿಕೆ ಮೇಲೆ ನಿಗಾ ಇಡುವುದು ಮುಖ್ಯವಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮತ್ತೆ ಮೂರು ಬಾಲ್ಯವಿವಾಹಗಳು ನಡೆದಿವೆ. ಹೋಗಿವೆ. ಮೂರು ಮದುವೆಗಳನ್ನು ನಿಲ್ಲಿಸಲಾಗಿದೆ. ಬಾಲ್ಯ ವಿವಾಹ ಸಂಬಂಧ ಸಾಕಷ್ಟು ಅರಿವು ಕಾರ್ಯಕ್ರಮಗಳೂ ನಡೆಯುತ್ತಿವೆ. ಸಾರ್ವಜನಿಕರು ಎಚ್ಚೆತ್ತು ಬಾಲ್ಯ ವಿವಾಹ ತಡೆಗೆ ಇಲಾಖೆಗೆ ಸಹಕಾರ ನೀಡಬೇಕಿದೆ. ಸಿ.ವಿ.ರಾಮನ್ ಪ್ರಭಾರ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ