

ಹನೂರು : ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಂಬಾಡಿ ಗ್ರಾಮಕ್ಕೆ ಮಂಗಳವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪಾಲಕರಿಗೆ ಬುದ್ಧಿವಾದ ಹೇಳುವುದರ ಮೂಲಕ ನಡೆಯಬೇಕಿದ್ದ ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದೆ.
ಗ್ರಾಮದ 17 ವರ್ಷದ ಅಪ್ರಾಪ್ತೆಗೆ ಇದೇ ಗ್ರಾಮದ ಮಾದೇಶ ಎಂಬಾತನೊಂದಿಗೆ ಸೆ.4ರಂದು ವಿವಾಹ ನಿಶ್ಚಯವಾಗಿದ್ದು, ಕುಟುಂಬಸ್ಥರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಈ ಬಗ್ಗೆ ಮಕ್ಕಳ ಸಹಾಯವಾಣಿ 1098ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ಮಹೇಶ್, ಆರ್‌ಐ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಿವಲೀಲಾ, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸ್ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದು ಪರಿಶೀಲಿಸಿದರು. ಬಾಲ್ಯ ವಿವಾಹ ಕಾನೂನಿನ ಅಪರಾಧ. ಸಂಬಂಧಪಟ್ಟವರು ಕಾನೂನಿನ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಬಾಲ್ಯ ವಿವಾಹ ನಡೆಸದಂತೆ ಪಾಲಕರು ಹಾಗೂ ಕುಟುಂಬಸ್ಥರಿಗೆ ಬುದ್ಧಿವಾದ ಹೇಳಿ ಮನವೊಲಿಸುವುದರ ಮೂಲಕ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳ ತಂಡ ತಡೆಯುವುದರಲ್ಲಿ ಯಶಸ್ವಿಯಾಗಿದೆ. ಅಪ್ರಾಪ್ತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕರೆದೊಯ್ಯಲಾಗಿದೆ.