

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲ್ಯವಿವಾಹ ನಿಷೇಧ ಅಭಿಯಾನಕ್ಕೆ ಭಾನುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಮೇಯರ್ ಪ್ರೇಮಾನಂದ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿ, ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಯಾಗಿ ಹಲವು ವರ್ಷಗಳು ಸಂದರೂ, ಜನರಲ್ಲಿ ಇನ್ನೂ ಜಾಗೃತಿ ಅರಿವು ಮೂಡಿಲ್ಲ. ಒಂದು ಬಾಲ್ಯ ವಿವಾಹ ನಡೆದರೂ, ನಾನಾ ರೀತಿಯಲ್ಲಿ ಅದರ ದುಷ್ಪರಿಣಾಮ ಕಾಡುತ್ತದೆ. ಸಮಾಜದ ರಕ್ಷಣೆಗಾಗಿ ಜಾಗೃತಿ ಅಗತ್ಯ ಎಂದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಬಾಲ್ಯವಿವಾಹ ನಿಷೇಧ ಅಭಿಯಾನದ ಭಾಗವಾಗಿ ಪ್ರಮಾಣವಚನ ಬೋಧಿಸಿದರು. ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಡಾ.ಮಂಜುನಾಥ ಭಂಡಾರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ, ಇಲಾಖಾ ಉಪನಿರ್ದೇಶಕ ಪಾಪಾ ಬೊವಿ ಮೊದಲಾದವರಿದ್ದರು.