ಬಾಲ್ಯವಿವಾಹ ತಡೆಗೆ ಜಾಗೃತಿ ವಹಿಸಬೇಕು

dc meeting
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬಸವ ಜಯಂತಿ ಮತ್ತು ಅಕ್ಷಯ ತೃತೀಯ ದಿನವಾದ ಏ.30 ರಂದು ಸಾಮೂಹಿಕ ವಿವಾಹ ಅಥವಾ ವಯಕ್ತಿಯ ವಿವಾಹ ಕಾರ್ಯಕ್ರಮಗಳಲ್ಲಿ ಬಾಲ್ಯವಿವಾಹಗಳು ಹೆಚ್ಚು ನಡೆಯುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಬಾಲ್ಯವಿವಾಹ ತಡೆಗೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಸೂಚಿಸಿದ್ದಾರೆ.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಬಾಲ್ಯ ವಿವಾಹವೆಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದೊಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂಥ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುವುದು ಆದ್ದರಿಂದ ಸಾಮೂಹಿಕ ವಿವಾಹಗಳು ನಡೆಯುವ ಜಾಗದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಸಾರ್ವಜನಿಕರು ಈ ರೀತಿಯ ಮದುವೆ ಏರ್ಪಾಡಾಗಿರುವ ಮಾಹಿತಿ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆ ಅಥವಾ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಬಾಲ್ಯವಿವಾಹದಂಥ ಕಾನೂನು ಬಾಹಿರ ಕೃತ್ಯ ತಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಜೈಲು ಶಿಕ್ಷೆ ಹಾಗೂ ದಂಡ: ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2016 ಪ್ರಕಾರ ಬಾಲ್ಯವಿವಾಹಗಳನ್ನು ಏರ್ಪಡಿಸುವ ಪಾಲಕರು ಅಥವಾ ಕುಟುಂಬದವರು, 18 ವರ್ಷದೊಳಗಿನ ಹುಡುಗಿಯನ್ನು ಮದುವೆಯಾಗುವ ವಯಸ್ಕ ವ್ಯಕ್ತಿ ಮತ್ತು ಮದುವೆಯಲ್ಲಿ ಭಾಗವಹಿಸುವ, ಎಲ್ಲ ರೀತಿ ಸಹಕರಿಸಿದ ಕುಟುಂಬಸ್ಥರನ್ನೂ ಸಹ ತಪ್ಪಿತಸ್ಥರು ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಇವರಿಗೆ ಬಾಲ್ಯವಿವಾಹ ಕಾಯ್ದೆಯ ಪ್ರಕಾರ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಅಂದರೆ ಎರಡು ವರ್ಷಗಳ ಕಾಲ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಅಥವಾ ಇವರೆಡರಿಂದಲು ಶಿಕ್ಷೆಗೆ ಒಳಪಡುತ್ತಾರೆ ಎಂದು ಡಿಸಿ ತಿಳಿಸಿದರು.

ಸ್ವಯಂ ದೂರು ದಾಖಲಿಸಬಹುದು: ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರತೀ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಪ್ರೇರಿತವಾಗಿ ದೂರು ದಾಖಲು ಮಾಡಲು ಅವಕಾಶವಿರುತ್ತದೆ. ಅದೇ ರೀತಿ ಇದು ಕೇವಲ ಸರ್ಕಾರಿ ಅಧಿಕಾರಿಗಳ ಜವಾಬ್ದಾರಿಯಾಗದೇ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬಾಲ್ಯವಿವಾಹ ನಿಷೇಧಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಬರುವ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಕಲ್ಯಾಣ ಮಂಟಪಗಳಲ್ಲಿ ಸಾಮೂಹಿಕ ಅಥವಾ ವೈಯಕ್ತಿಕ ವಿವಾಹದಲ್ಲಿ ಯಾವುದೇ ಬಾಲ್ಯವಿವಾಹಗಳು ಜರುಗದಂತೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ 1098, ಪೊಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ರಕ್ಷಣಾ ಘಟಕ 080-29560034 ಹಾಗೂ ಸಂಬಂಧಪಟ್ಟ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಘಾಟಿ ವಿವಾಹದ ಮೇಲೆ ಕಣ್ಗಾವಲು: ಮೇ 7 ರಂದು ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯಲಿರುವ ಸಾಮೂಹಿಕ ಸರಳ ವಿವಾಹದಲ್ಲಿ ನೋಂದಣಿಯಾಗಿರುವ ಎಲ್ಲ ಜೋಡಿಗಳ ವಯಸ್ಸು ಧೃಢೀಕರಣ ಅಗತ್ಯವಾಗಿದ್ದು ಈ ಬಗ್ಗೆ ಎಚ್ಚರಿಕೆ ವಹಿಸಬೇಕು, ಅಧಿಕೃತ ದಾಖಲೆಗಳನ್ನು ಪರಾಮರ್ಶಿಸಿ ವಿವಾಹ ಕಾರ್ಯಕ್ರಮದಲ್ಲಿ ಅಗತ್ಯ ಸಿದ್ದತೆ ಕೈಗೊಳ್ಳಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net