

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಶುಭಸಮಾರಂಭಗಳಿಗೆ ಅತ್ಯಂತ ಪ್ರಶಸ್ತ ದಿನವೆನಿಸಿರುವ ಅಕ್ಷಯ ತೃತೀಯ ದಿನದಂದು ನಡೆಯಲಿರುವ ಸಹಸ್ರಾರು ಮದುವೆ ಸಮಾರಂಭಗಳಲ್ಲಿ ಬಾಲ್ಯವಿವಾಹ ನಡೆಯುವ ಸಾಧ್ಯತೆ ಬಗ್ಗೆ ಸರ್ಕಾರ ಶಂಕಿಸಿದ್ದು, ಇಂಥ ಅಪಸವ್ಯ ತಡೆಯುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ರವಾನಿಸಿದೆ.
ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಮೇ 10 ರಂದು ರಾಜ್ಯದ ವಿವಿಧ ದೇಗುಲಗಳಲ್ಲಿ ಸಾಮೂಹಿಕ ವಿವಾಹಗಳು ಆಯೋಜನೆಯಾಗಲಿದ್ದು, ಇಂಥ ಕಾರ್ಯಕ್ರಮಗಳಲ್ಲಿ ಬಾಲ್ಯವಿವಾಹ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದೇವಸ್ಥಾನಗಳ ಮೇಲೆ ಕಣ್ಗಾವಲಿರಿಸಿದೆ.
ಖುದ್ದು ಹಾಜರಿಗೆ ಸೂಚನೆ: ಗೃಹಪ್ರವೇಶ, ಮದುವೆ ಸೇರಿ ಇನ್ನಿತರ ಶುಭಕಾರ್ಯಗಳಿಗೆ ಅಕ್ಷಯ ತೃತೀಯ ದಿನ ಶುಭವೆಂಬ ಕಾರಣಕ್ಕೆ ರಾಜ್ಯದ ಎಲ್ಲ ಕಡೆಗಳಲ್ಲಿ ಶುಭಸಮಾರಂಭಗಳು ಆಯೋಜನೆಗೊಂಡಿವೆ. ಅದರಲ್ಲೂ ವಿವಾಹ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿದೆ. ಅಧಿಕೃತವಾಗಿ ನೋಂದಣಿಯಾಗಿರುವ ಸಾಮೂಹಿಕ ವಿವಾಹಗಳ ಬಗ್ಗೆ ವರದಿ ಪಡೆದು ಇಲಾಖೆ ಪರಿಶೀಲನೆ ನಡೆಸಿದೆ. ಅಲ್ಲದೆ ಸಾಮೂಹಿಕ ಕಾರ್ಯಕ್ರಮ ನಡೆಯುವ ವೇಳೆ ಇಲಾಖೆಯ ಅಧಿಕಾರಿಗಳು ಖುದ್ದು ಹಾಜರಿರುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇನ್ನು ಅಧಿಕೃತವಾಗಿ ನೋಂದಣಿ ಮಾಡದೆ ದೇಗುಲಗಳಲ್ಲಿ ದಿಢೀರ್ ಸಾಮೂಹಿಕ ವಿವಾಹ ಏರ್ಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಮುಖ ದೇಗುಲಗಳ ಮೇಲೆ ಕಣ್ಣಿಡುವಂತೆ ಸರ್ಕಾರ ಸೂಚನೆ ನೀಡಿದೆ. ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ ವಿವಾಹಗಳು ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಇಂತಹ ವಿವಾಹಗಳಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆಯಾ ಜಿಲ್ಲಾಡಳಿತಕ್ಕೆ ಸೂಚನೆ ರವಾನಿಸಿದೆ. ಜಿಲ್ಲಾಡಳಿತದ ಆದೇಶದಂತೆ ಅಲರ್ಟ್ ಅಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಈಗಾಗಲೇ ಎಲ್ಲ ದೇಗುಲಗಳ ಆಡಳಿತ ಮಂಡಳಿಗೆ ಸೂಚನೆ ರವಾನಿಸಿದ್ದು, ಇಂಥ ಸಂದರ್ಭ ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದೆ.
ಶಾಲೆ ಬಿಟ್ಟ ಮಕ್ಕಳ ಲೆಕ್ಕ ಕಳೆದೆರಡು ವರ್ಷದಿಂದ ನಾನಾ ಕಾರಣಕ್ಕೆ ಶಾಲೆ ಬಿಟ್ಟ ಮಕ್ಕಳು ಬಾಲ್ಯವಿವಾಹದ ಸಂಕೋಲೆಗೆ ಸಿಲುಕುವ ಅಪಾಯವಿರುತ್ತದೆ ಎಂಬುದು ಸರ್ಕಾರದ ಲೆಕ್ಕಚಾರವಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಮಕ್ಕಳ ವಿವರ ಕಲೆ ಹಾಕುವಂತೆ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಆಯಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಾಲೆ ಬಿಟ್ಟ ಮಕ್ಕಳ ವಿವರ ಕಲೆ ಹಾಕಿದೆ. ಈ ಸಂದರ್ಭದಲ್ಲಿ ಇಂಥ ಮಕ್ಕಳ ಮದುವೆಗೆ ಸಿದ್ದತೆ ನಡೆಸಲಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ದೇಗುಲಗಳ ಮೇಲೆ ಕಣ್ಣು ಜಿಲ್ಲೆಯಲ್ಲಿ ಸಾಮೂಹಿಕ ವಿವಾಹಗಳು ನಡೆಯಲು ಸಾಧ್ಯತೆಗಳಿರುವಂತಹ ಪ್ರಸಿದ್ಧ ದೇವಸ್ಥಾನಗಳಾದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ, ಮಧುರೆ ದೇವಸ್ಥಾನ, ನೆಲಮಂಗಲ ತಾಲೂಕಿನ ಶಿವಗಂಗೆ, ದೇವಹಳ್ಳಿ ತಾಲೂಕಿನ ತಿಮ್ಮರಾಯಸ್ವಾಮಿ ಬೆಟ್ಟ(ಅವತಿ) ಹಾಗೂ ಹೊಸಕೋಟೆ ತಾಲೂಕಿನ ಶ್ರೀ ಕಾಳಬೈರವ ದೇವಸ್ಥಾನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿಯ ಮದ್ದೂರಮ್ಮ ದೇವಸ್ಥಾನದ ಮುಖ್ಯಸ್ಥರಿಗೆ ಸಾಮೂಹಿಕ ವಿವಾಹಗಳಲ್ಲಿ ಹಾಗೂ ಕಲ್ಯಾಣ ಮಂಟಪಗಳಲ್ಲಿ ಯಾವುದೇ ಬಾಲ್ಯವಿವಾಹಗಳಿಗೆ ಅವಕಾಶ ಮಾಡಿಕೊಡಬಾರದೆಂದು ಇಲಾಖೆ ಸೂಚನೆ ನೀಡಿದೆ.
ಕಾರ್ಯಕರ್ತೆಯರಿಗೆ ಜವಾಬ್ದಾರಿ ಜಿಲ್ಲೆಯ ಎಲ್ಲ ವೃತ್ತದ ಮೇಲ್ವಿಚಾರಕಿಯರಿಗೆ, ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ, ಆಯಾ ಗ್ರಾಮಗಳಲ್ಲಿ ಬಾಲ್ಯವಿವಾಹ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಇಂಥ ವಿಷಯದ ಬಗ್ಗೆ ತೀವ್ರ ನಿಗಾವಹಿಸುವ ಮೂಲಕ ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಎಲ್ಲಿಯಾದರೂ ಬಾಲ್ಯವಿವಾಹ ನಡೆಯುವ ಸುಳಿವು ಕಂಡುಬಂದಲ್ಲಿ ಕೂಡಲೇ ಸಹಾಯವಾಣಿ 1098 ಗೆ ಕರೆ ಮಾಡಿ ತಿಳಿಸಬಹುದು. ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ದೊಡ್ಡಬಳ್ಳಾಪುರದಲ್ಲಿ 6 ಬಾಲ್ಯವಿವಾಹ ತಡೆಯಲಾಗಿದೆ, ಇನ್ನು ದೇವನಹಳ್ಳಿಯಲ್ಲಿ ಪ್ರಕರಣವೊಂದರಲ್ಲಿ ಎ್ಐಆರ್ ದಾಖಲಿಸಲಾಗಿದೆ. ಬಾಲ್ಯವಿವಾಹ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಇಂಥ ಪ್ರಕರಣಗಳು ಮರುಕಳಿಸುತ್ತಿವೆ. ಅಕ್ಷಯ ತೃತೀಯ ದಿನದಂದು ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನ ಸೇರಿ ವಿವಾಹ ಕಾರ್ಯಕ್ರಮ ನಡೆಯುವ ಸ್ಥಳಗಳ ಮೇಲೆ ಇಲಾಖೆ ಕಣ್ಣಿಟ್ಟಿದೆ.
ಮುದ್ದಣ್ಣ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂ.ಗ್ರಾಮಾಂತರ