ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇವೆ ಬಾಲ್ಯವಿವಾಹ ; 3 ವರ್ಷದಲ್ಲಿ 122 ಪ್ರಕರಣ ಪತ್ತೆ

DC K Srinivas 01
Published on

| ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ತಂತ್ರಜ್ಞಾನ, ಶಿಕ್ಷಣ ಎಷ್ಟೇ ಮುಂದುವರಿದರೂ ಬಾಲ್ಯವಿವಾಹದಂಥ ಸಾಮಾಜಿಕ ಪಿಡುಗಿಗೆ ಸಂಪೂರ್ಣ ಕಡಿವಾಣ ಬೀಳುತ್ತಿಲ್ಲ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಕರಣ ಹೆಚ್ಚುತ್ತಲೇ ಇವೆ. ಹಾಗೆಯೇ ಬಾಲ್ಯವಿವಾಹ ತಡೆಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಕರೊನಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಬಾಲ್ಯವಿವಾಹ ಪ್ರಯತ್ನ ನಡೆದಿರುವುದು ಪತ್ತೆಯಾಗಿವೆ. 2018-19ರಲ್ಲಿ 21 ಪ್ರಕರಣಗಳು ಪತ್ತೆಯಾಗಿದ್ದವು. 2019-20ರಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ ನಿಗದಿಯಾಗಿದ್ದ 43 ಪ್ರಕರಣ ಪತ್ತೆಯಾಗಿತ್ತು. ಅಷ್ಟನ್ನೂ ತಡೆಗಟ್ಟಿರುವ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದರಲ್ಲಿ 4 ಪ್ರಕರಣಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಿಸಿದೆ. ಪ್ರಸಕ್ತ ಸಾಲಿನಲ್ಲಿ 58 ಬಾಲ್ಯವಿವಾಹ ಪ್ರಕರಣ ಪತ್ತೆಯಾಗಿದ್ದು, 50 ವಿವಾಹಗಳಿಗೆ ತಡೆಯೊಡ್ಡಲಾಗಿದೆ, ಇದರಲ್ಲಿ 8 ಪ್ರಕರಣಗಳ ವಿರುದ್ಧ ಎ್ಐಆರ್ ದಾಖಲಿಸಲಾಗಿದೆ.

ಶಾಲೆ ಆರಂಭದ ಬಳಿಕ ಸಿಗಲಿದೆ ಲೆಕ್ಕ: ಪ್ರತಿ ವರ್ಷ ಶೈಕ್ಷಣಿಕ ವರ್ಷ ಆರಂಭವಾಗುವ ಜೂನ್ ನಂತರ ಹೆಣ್ಣು ಮಕ್ಕಳು ಶಾಲೆ ತೊರೆಯುವ ಪ್ರಕರಣಗಳು ಕಂಡುಬರುತ್ತವೆ. ಹೆಣ್ಣುಮಕ್ಕಳ ಶಿಕ್ಷಣ ಮೊಟಕುಗೊಳಿಸಿ ವಿವಾಹ ಸರಪಳಿ ಬಿಗಿಯಲು ಪಾಲಕರು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಹದ್ದಿನ ಕಣ್ಣಿಟ್ಟಿರುವ ಇಲಾಖೆ ಶಾಲೆ ಪುನರಾರಂಭದ ಬಳಿಕ ಹೆಣ್ಣುಮಕ್ಕಳ ದಾಖಲಾತಿ ಬಗ್ಗೆ ಪರಿಶೀಲನೆ ನಡೆಸಲು ಸಿದ್ಧತೆ ನಡೆಸಿದೆ.

ಪ್ರೇಮ ಪ್ರಕರಣಗಳು: ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಪ್ರೇಮ ವಿವಾಹಕ್ಕೆ ಸಂಬಂಧಿಸಿದ್ದೇ ಬಹಳಷ್ಟು ಪ್ರಕರಣಗಳಿಂದ ಬಾಲ್ಯವಿವಾಹ ನಡೆಸಲು ಮುಂದಾಗಿರುವುದು ಕಂಡುಬಂದಿದೆ. ಪ್ರೇಮ ಪಾಶಕ್ಕೆ ಬಿದ್ದ ಮಕ್ಕಳು ದಾರಿ ತಪ್ಪುವ ಆತಂಕದಿಂದ ಬೇಗನೆ ಮದುವೆ ಮುಗಿಸಲು ಪಾಲಕರು ಮುಂದಾಗಿದ್ದರು. ಮತ್ತೊಂದೆಡೆ ಪ್ರೀತಿ ಪ್ರೇಮ ನೆಪದಲ್ಲಿ ಮನೆಯಲ್ಲಿ ಮರ್ಯಾದೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಬೇರೆಯವರೊಂದಿಗೆ ಮದುವೆ ಮಾಡಿ ಮುಗಿಸಲು ಯೋಜಿಸುತ್ತಿದ್ದರು ಎಂಬುದು ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ.

ತಂಡ ರಚನೆ:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಾಲ್ಯವಿವಾಹ ಹಾಗೂ ಇಲಾಖೆಗೆ ಸಂಬಂಧಿಸಿದಂತೆ, ಪ್ರತಿ ತಿಂಗಳು ಸಭೆ ಮಾಡಿ, ಅಧಿಕಾರಿಗಳಿಗೆ ಸೂಚನೆ ಮಾರ್ಗದರ್ಶನ ನೀಡುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ, ಪೊಲೀಸರು, ಆಯಾ ತಾಲೂಕಿನ ಸಿಡಿಪಿಒ ಸೇರಿ ವಿವಿಧ ಇಲಾಖೆ ಒಳಗೊಂಡಂತೆ ಬಾಲ್ಯ ವಿವಾಹ ತಡೆಗೆ ತಂಡ ರಚಿಸಲಾಗಿದೆ.

ಬಾಲ್ಯವಿವಾಹ ತೊಂದರೆಗಳು: ಕೆಲವರು ಮಕ್ಕಳಿಗೆ ಬೇಗ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಲು ಬಾಲ್ಯ ವಿವಾಹಕ್ಕೆ ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಕುಟುಂಬ ನಿರ್ವಹಣೆ ಮಾಡುವಷ್ಟು ಜವಾಬ್ದಾರಿ ಇಲ್ಲದೆ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚಿಕ್ಕವಯಸ್ಸಿಗೆ ವಿಚ್ಚೇಧನದಂಥ ಕಠಿಣ ನಿಲುವಿಗೆ ಬರುವ ಅಪಾಯವಿರುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಬಾಲ್ಯ ವಿವಾಹ ತಡೆಯಲು ಹಾಗೂ ಇಂತಹ ಮಕ್ಕಳ ಉಪಯೋಗಕ್ಕಾಗಿ 1098 ಗೆ ಕರೆ ಮಾಡಬಹುದು. ಈ ನಂಬರ್‌ಗೆ ಕರೆ ಮಾಡಿದರೆ ಮಕ್ಕಳನ್ನು ರಕ್ಷಿಸಲಾಗುವುದು. ಬಾಲ್ಯ ವಿವಾಹಕ್ಕೆ 3 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೂ ದಂಡ ಹಾಕಬಹುದು. ಇದೊಂದು ಸಾಮಾಜಿಕ ಪಿಡುಗು, ಈ ಬಗ್ಗೆ ಪಾಲಕರು ಅರಿವು ಮೂಡಿಸಿಕೊಳ್ಳಬೇಕು. ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಬಾಲ್ಯವಿವಾಹ ತಡೆಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ, ಎಲ್ಲಿಯಾದರೂ ಬಾಲ್ಯವಿವಾಹಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ದೊರೆತರೆ ತಕ್ಷಣ ಕಾರ್ಯಪ್ರವೃತ್ತರಾಗಿ ವಿವಾಹ ತಡೆಯಲಾಗುತ್ತಿದೆ. ಇದಕ್ಕೆ ಇನ್ನಿತರ ಇಲಾಖೆಯ ಸಹಕಾರವೂ ಇದೆ. ಭಾಗಶಃ ಪ್ರಕರಣಗಳಲ್ಲಿ ಬಾಲ್ಯವಿವಾಹ ತಡೆಯಲಾಗಿದೆ, ಕೆಲವೊಂದು ಪ್ರಕರಣಗಳಲ್ಲಿ ಎ್ಐಆರ್ ದಾಖಲಿಸಲಾಗಿದೆ. ಅನಿತಾಲಕ್ಷ್ಮಿ, ಸಿಡಿಪಿಒ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net