ದೊಡ್ಡಬಳ್ಳಾಪುರದಲ್ಲಿ ಬಾಲಕಾರ್ಮಿಕರ ರಕ್ಷಣೆ

child
ದೊಡ್ಡಬಳ್ಳಾಪುರದಲ್ಲಿ ಬಾಲಕಾರ್ಮಿಕ ಪದ್ದತಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು. ಕಾರ್ಮಿಕ ಅಧಿಕಾರಿ ಎಚ್.ಆರ್.ನಾಗೇಂದ್ರ , ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಎಸ್. ಸುಬ್ಬಾರಾವ್, ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣಪ್ಪ, ಕಾರ್ಮಿಕ ನಿರೀಕ್ಷಕ ದಯಾನಂದ್ ಸಾಗರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿ ಕುಮಾರ್ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ-1098 ಜಂಟಿಯಾಗಿ ದೊಡ್ಡಬಳ್ಳಾಪುರದ ವಿವಿಧ ಸ್ಥಳಗಳಲ್ಲಿ ಶುಕ್ರವಾರ ತಪಾಸಣೆ ನಡೆಸಿದ್ದು, ಇಬ್ಬರು ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಶಿಕ್ಷಾರ್ಹ ಅಪರಾಧ:
ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ ಅಂತಹವರಿಗೆ ಕನಿಷ್ಠ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ 2 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಈ ವೇಳೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ನಾಗೇಂದ್ರ ತಿಳಿಸಿದರು.ರಕ್ಷಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಮಕ್ಕಳನ್ನು ದುಡಿಮೆಗೆ ನೇಮಿಸಿಕೊಂಡ ಮಾಲೀಕರ ವಿರುದ್ಧ ಕಾನೂನು ಕ್ರಮಜರುಗಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ನಿರ್ದೇಶಕ ಸುಬ್ಬಾರಾವ್ ತಿಳಿಸಿದರು.
ಕರಪತ್ರದ ಮೂಲಕ ಜಾಗೃತಿ: ವಿವಿಧ ಅಂಗಡಿಗಳು, ಗ್ಯಾರೇಜುಗಳು, ಬೇಕರಿಗಳು, ಮಾಂಸ ಮಾರಾಟ ಅಂಗಡಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕರಪತ್ರವನ್ನು ಮತ್ತು ಭಿತ್ತಿಪತ್ರಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಲಾಯಿತು. ತಮ್ಮ ಸುತ್ತಮುತ್ತಲಿನಲ್ಲಿ ಯಾವುದೇ ಮಕ್ಕಳನ್ನು ನೇಮಿಸಿ ಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವುದರ ಮೂಲಕ ಮಕ್ಕಳನ್ನು ರಕ್ಷಣೆ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಅಧಿಕಾರಿಗಳು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net