ಕಲಿಕೆ ವಯಸ್ಸಿಲ್ಲಿ ದುಡಿಮೆಗೆ ಹಚ್ಚದಿರಿ

child
Published on

ಜಿಲ್ಲಾ ನ್ಯಾಯಾಧೀಶ ಎಂ.ಎಲ್.ರಘುನಾಥ್ ಸಲಹೆ


ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
21ನೇ ಶತಮಾನದಲ್ಲಿದ್ದರೂ ಅಪ್ರಾಪ್ತರನ್ನು ದುಡಿಮೆಗೆ ಬಳಸಿಕೊಳ್ಳುವ ಶೋಷಣೆ ನಿಂತಿಲ್ಲ. ಶಿಕ್ಷಣ ಕಲಿಕೆ ವಯಸ್ಸಿನಲ್ಲಿ ದುಡಿಮೆಗೆ ಬಳಸಿಕೊಳ್ಳಲು ಬಡತನ, ಮೌಢ್ಯತೆ ಮತ್ತು ಅನಕ್ಷರತೆಯೇ ಪ್ರಮುಖ ಕಾರಣ ಎಂದು ಜಿಲ್ಲಾ ನ್ಯಾಯಾಧೀಶ ಎಂ.ಎಲ್.ರಘುನಾಥ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಮಗುವಿಗೂ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆತಾಗ ಬಾಲ ಕಾರ್ಮಿಕರನ್ನು ತಡೆಯಲು ಸಹಕಾರಿಯಾಗಲಿದೆ. ಆದರೆ ಶಿಕ್ಷಣದ ವಿಚಾರದಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ಹಣ ಮಾಡುವುದನ್ನೇ ಮುಖ್ಯಗುರಿಯಾಗಿಸಿಕೊಂಡಿವೆ. ಇಂದು ಜನಸಾಮಾನ್ಯರು, ಬಡವರ್ಗದವರು ತಮ್ಮ ಮಕ್ಕಳನ್ನು ಎಲ್‌ಕೆಜಿಗೆ ದಾಖಲಿಸುವುದೇ ಕಷ್ಟವಾಗಿದೆ. ಇಂದಿನ ಎಲ್‌ಕೆಜಿ ಶುಲ್ಕಕ್ಕೆ ಹೋಲಿಕೆ ಮಾಡಿದರೆ ನಾವು ಸರ್ಕಾರಿ ಶಾಲೆಯಲ್ಲಿ ಪೂರ್ಣ ವಿದ್ಯಾಭ್ಯಾಸ ಮಾಡಬಹುದು ಎಂದರು.
5ನೇ ಅಪರ ಸತ್ರ ಸಿವಿಲ್ ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಮಾತನಾಡಿ, ಆಡಿ ನಲಿದು ಆಟ ಪಾಠ ಕಲಿಯುವ ವಯಸ್ಸಿನ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದರಿಂದ ಅವರ ದೈಹಿಕ, ಮಾನಸಿಕ ಆರೋಗ್ಯ ಕುಂಠಿತವಾಗಲಿದೆ. ಜತೆಗೆ ಆಯುಷ್ಯ ಪ್ರಮಾಣ ಸಹ ಕಡಿಮೆಯಾಗಲಿದೆ. ಕಾನೂನಿನ ಪ್ರಕಾರ 18 ವಯಸ್ಸಿಗಿಂತ ಕಡಿಮೆಯವರನ್ನು ದುಡಿಮೆಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದರು.
ಹಿರಿಯ ಪ್ರಧಾನ ನ್ಯಾಯಾಧೀಶ ಸಂದೀಪ್ ಸಾಲಿಯಾನ ಮಾತನಾಡಿ, ನಮ್ಮ ಮಕ್ಕಳು ಮಾತ್ರ ಚೆನ್ನಾಗಿದ್ದರೆ ಸಾಲದು. ಸಮಾಜದ ಎಲ್ಲ ವರ್ಗದ ಮಕ್ಕಳೂ ನಮ್ಮ ಮಕ್ಕಳಂತೆ ಬೆಳೆಯಬೇಕು, ಶಿಕ್ಷಣ ಪಡೆಯಬೇಕು ಎಂಬ ಮನೋಸ್ಥಿತಿ ಎಲ್ಲರಲ್ಲೂ ಉಂಟಾಗಬೇಕು ಎಂದರು.
ತಾಲೂಕು ಆಡಳಿತ ಸೌಧದಿಂದ ಅಂಬೇಡ್ಕರ್ ಭವನದವರೆಗೂ ಬಾಲ ಕಾರ್ಮಿಕ ವಿರೋಧಿ ಜಾಗೃತ ಜಾಥಾ ನಡೆಸಲಾಯಿತು. ಜಿಲ್ಲಾಧಿಕಾರಿ ಲತಾ ಜಾಥಾಗೆ ಚಾಲನೆ ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪ್ರಕರಣದಲ್ಲಿ ಪತ್ತೆಹಚ್ಚಿ ಮುಖ್ಯವಾಹಿನಿಗೆ ದಾಖಲು ಮಾಡಿ 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.70 ಅಂಕಗಳನ್ನು ಪಡೆದ ಮೂವರು ವಿದ್ಯಾರ್ಥಿನಿಯರಿಗೆ 2000 ರೂ.ಗಳ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.
ಅಪರ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸುಕನ್ಯಾ ಸಿ.ಎಸ್., ದೊಡ್ಡಬಳ್ಳಾಪುರ ಎಸಿ ತೇಜಸ್‌ಕುಮಾರ್.ಎನ್, ಕಾರ್ಮಿಕ ಅಧಿಕಾರಿ ನಾಗೇಂದ್ರ ಎಚ್.ಆರ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯೋಜನಾ ನಿರ್ದೇಶಕ ಸುಬ್ಬಾರಾವ್ ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಿ.ಎಲ್.ಎಸ್.ಪ್ರೇಮ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಶ್ರೀಕಂಠ, ಡಿಎಚ್‌ಒ ಡಾ. ಬಿ.ಕೆ.ವಿಜಯೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಜಿಲ್ಲಾಧಿಕಾರಿ ನಿರುಪಮ, ತಹಸೀಲ್ದಾರ್ ಶಿವರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮುನಿರಾಜು, ಶಿಕ್ಷಕ ಪುಟ್ಟಸ್ವಾಮಿ ಇತರರು ಇದ್ದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net