

ಚನ್ನರಾಯಪಟ್ಟಣ: ಸರ್ಕಾರ ಬಾಲಕಾರ್ಮಿಕ ಪದ್ಧತಿ ತೊಡೆದು ಹಾಕಲು ಅನೇಕ ಸವಲತ್ತುಗಳನ್ನು ನೀಡುತ್ತಿದ್ದರೂ, ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವುದು ಬೇಸರದ ಸಂಗತಿಯಾಗಿದೆ. ಬಾಲಕಾರ್ಮಿಕ ಪದ್ಧತಿ ತೊಡೆದು ಹಾಕಲು ವಿವಿಧ ಇಲಾಖೆಗಳ ಜತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಶ್ಮಿ ತಿಳಿಸಿದರು.
ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಪ್ರಯುಕ್ತ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಪಟ್ಟಣದ ಮೇಗಲಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಾಲಕಾರ್ಮಿಕರ ನಿರ್ಮೂಲನ ದಿನ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಡತನ ಮತ್ತು ಆರ್ಥಿಕ ಅಭದ್ರತೆಯನ್ನು ನಿವಾರಿಸಲು ಪಾಲಕರು ತಮ್ಮ ಮಕ್ಕಳನ್ನು ಕೂಲಿಗಾಗಿ ಹೊರಗೆ ಕಳುಹಿಸುತ್ತಿದ್ದಾರೆ. ಇಂತಹ ಕುಟುಂಬಗಳ ಆರ್ಥಿಕ ಭವಿಷ್ಯವನ್ನು ಸುಧಾರಿಸಲು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ, ಮಕ್ಕಳ ತಂದೆ-ತಾಯಿಗಳಿಗೆ ತಿಳಿಹೇಳಬೇಕು. ಬಾಲಕಾರ್ಮಿಕದಂಥ ಅನಿಷ್ಟ ಪದ್ಧತಿಗಳನ್ನು ನಾವೆಲ್ಲರೂ ವಿರೋಧಿಸಬೇಕು. ಹದಿನಾಲ್ಕು ವರ್ಷದೊಳಗಿನ ಎಲ್ಲ ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕರಾಗಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಿ ಮುಖ್ಯವಾಹಿನಿಗೆ ತರುವ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಸಮಾಜದಲ್ಲಿ ಶೇ.30ರಷ್ಟು ಮಕ್ಕಳು ತಮ್ಮ ಬಾಲ್ಯಾವಸ್ಥೆಯಿಂದ ವಂಚಿತರಾಗುತ್ತಾರೆ. ಶಿಕ್ಷಿತರಾದವರು ಬಾಲಕಾರ್ಮಿಕ ಪದ್ಧತಿಯನ್ನು ವಿರೋಧಿಸಬೇಕು. ಬಾಲಕಾರ್ಮಿಕರನ್ನು ಕಂಡಾಗ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರಯತ್ನ ಪಡಬೇಕು ಎಂದು ತಿಳಿಸಿದರು.
ಮೇಘಲಕೇರಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಜಿ.ಮಲ್ಲೇಗೌಡ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಲು ಮಾಡಿದ ಸಕಾರಾತ್ಮಕ ಪ್ರಯತ್ನಕ್ಕೆ ಕೋವಿಡ್ ಮಹಾಮಾರಿ ಅಡ್ಡಿಪಡಿಸಿತು. ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಕುಟುಂಬಗಳು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿವೆ. ಇದರಿಂದ ಅಂತಹ ಕುಟುಂಬಗಳ ಮಕ್ಕಳು ಜೀವನೋಪಾಯಕ್ಕಾಗಿ ಜೀವನ ಸಾಗಿಸಲು ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ವಿವಿಧ ಸಮಸ್ಯೆಗಳಿಂದ ಬಾಲ್ಯದ ಹಂತದಲ್ಲಿಯೇ ಕೆಲಸ ಮಾಡುವ ಸ್ಥಿತಿ ಎದುರಿಸುತ್ತಾರೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂದರು.
ತಾಲೂಕು ಕಾರ್ಮಿಕ ನಿರೀಕ್ಷಕ ಎಂ.ಪುರುಷೋತ್ತಮ್ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಪ್ರಮಾಣ ವಚನ ಬೋಧಿಸಿದರು. ಪರಿಸರ ಪ್ರೇಮಿ ಚ.ನಾ.ಅಶೋಕ್ ಮಾತನಾಡಿದರು. ನ್ಯಾಯಾಂಗ ಇಲಾಖೆಯ ಭಗವಾನ್, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.