

ಕೆಜಿಎಫ್- ಕಾರ್ಮಿಕ ಇಲಾಖೆಯ ಅಧಿಕಾರಿಗಳ ಇಚ್ಚಾಶಕ್ತಿ ಹಾಗೂ ಪಾಲಕ-ರು/ ಪೋಷಕರು, ಉದ್ಯೋಗದಾತರು ಸೇರಿ ಎಲ್ಲರ ಸಹಕಾರದಿಂದ ಬಾಲಕಾರ್ಮಿರನ್ನು ಕೆಲಸದಿಂದ ಹೊರಗಿಡಬಹುದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ವಿನೋದ್ಕುಮಾರ್ ಹೇಳಿದರು.
ನಗರದ ಉರಿಗಾಂಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಮಿಕ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾರಕವಾಗಿದ್ದು, ಬಾಲಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಸಂವಿಧಾನ, ಸರ್ಕಾರಗಳು ಅನೇಕ ಕಾಯ್ದೆ-&ಕಾನೂನುಗಳನ್ನು ಜಾರಿಗೊಳಿಸಿವೆ. ಇವುಗಳನ್ನು ಕಟ್ಟುನಿಟ್ಟಾಗಿ ಕಾರ್ಮಿಕ ಇಲಾಖೆ ಅನುಷ್ಠಾನಗೊಳಿಸಬೇಕಿದೆ. ಮಕ್ಕಳು ದೇಶದ ಆಸ್ತಿಯಾಗಿದ್ದು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳು ದೇಶದ ಆಧಾರ ಸ್ತಂಭಗಳಾಗಿದ್ದಾರೆ ಎಂದರೆ ತಪ್ಪಾಗಲಾರದು ಎಂದರು.
ನ್ಯಾಯಾಧೀಶೆ ಕೆ.ಶಮಿದಾ ಮಾತನಾಡಿ, ಕಾರ್ಮಿಕ ಕಾನೂನುಗಳು ಸ್ವಾತಂತ್ರ$್ಯ ಪೂರ್ವದಿಂದಲೇ ರಚಿಸಲಾಗಿದ್ದು, ನಂತರ ಅನೇಕ ಬಾಲ ಕಾರ್ಮಿಕರ ಕಾಯ್ದೆಗಳನ್ನು ಜಾರಿಗೊಳಿಸಿ ಬಾಲಕಾರ್ಮಿಕರ ನಿಮೂರ್ಲನೆಗೆ ಸರ್ಕಾರಗಳು ಶ್ರಮಿಸುತ್ತಿವೆ. ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಮುಖವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು. ದೇಶದಲ್ಲಿ ಬಡತನ ನಿಮೂರ್ಲನೆಯಾದರೆ, ಬಾಲ ಕಾರ್ಮಿಕತೆ ನಿಮೂರ್ಲನೆಯಾಗುತ್ತದೆಂಬ ಸಂಗತಿ ತಿಳಿಸಿಕೊಡಬೇಕಿದೆ ಎಂದರು.
ಸರ್ಕಾರಗಳು ಮಕ್ಕಳಿಗೆ ಅನೇಕ ಮೂಲ ಸೌಕರ್ಯಗಳನ್ನು ನೀಡುತ್ತಿವೆ. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡದೆ, ಸಮಾಜದಲ್ಲಿ ಉತ್ತಮ ಶಿಕ್ಷಣ ನೀಡಿ ಸದೃಢ ಮಾನವ ಸಂಪನ್ಮೂಲವನ್ನಾಗಿಸಿ ಎಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಕಾರ್ಮಿಕ ಇಲಾಖೆ ಅಧಿಕಾರಿಗಳು ಹೋಟೆಲ್, ಕಿರಾಣಿ ಅಂಗಡಿ, ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ದುಡಿಮೆಗೆ ಕಳುಹಿಸಿಕೊಡುತ್ತಾರೆ. ಅತಂಹ ಮಕ್ಕಳನ್ನು ತಪಾಸಣೆ ಮಾಡಿ ಸರ್ಕಾರದ ವಸತಿ ಶಾಲೆಗಳಿಗೆ ದಾಖಲಿಸಿ ಶಿಕ್ಷಣ ನೀಡುವಂತಹ ಕೆಲಸ ಮಾಡಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅನಿತಾ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಎಂಬ ಅನಿಷ್ಟ ಪಿಡುಗುನ್ನು ತೊಲಗಿಸಲು 2025ರ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಧ್ಯೇಯವಾಕ್ಯ, ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಪ್ರಯತ್ನಗಳನ್ನು ವೇಗಗೊಳಿಸೋಣ, ಈ ವರ್ಷದ ಧ್ಯೇಯ ವಾಕ್ಯವು ಸಾಧಿಸಿದ ಪ್ರಗತಿ ಮತ್ತು ಜಾಗತಿಕ ಗುರಿಗಳನ್ನು ತಲುಪುವ ಕ್ರಮವನ್ನು ತೀವ್ರಗೊಳಿಸುವುದನ್ನೂ ಸೇರಿ ಈ ಎರಡನ್ನು ಪ್ರತಿಬಿಂಬಿಸುವುದಾಗಿ ತಿಳಿಸಿದರು.