

ಪಿರಿಯಾಪಟ್ಟಣ: ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಪಟ್ಟಣ ನ್ಯಾಯಾಲಯದ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಸಮಿವುಲ್ಲಾ ಎಚ್ಚರಿಸಿದರು.
ಪಟ್ಟಣದ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಸೋಮವಾರ ಬಾಲಕಾರ್ಮಿಕ ಮತ್ತು ಕಿಶೋರ ಕಾಯ್ದೆ ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. 14 ರಿಂದ 18 ವರ್ಷದ ಮಕ್ಕಳನ್ನು ಕಠಿಣ ಕೆಲಸಗಳಿಗೆ ದುಡಿಸಿಕೊಳ್ಳುವುದು ಅಪರಾಧ ಎಂದು ತಿಳಿದಿದ್ದರೂ ಕೆಲವರು ಈ ಕೃತ್ಯದಲ್ಲಿ ತೊಡಗುತ್ತಿರುವುದು ಕಂಡು ಬರುತ್ತಿದೆ. ಈ ರೀತಿ ಮಕ್ಕಳನ್ನು ದುಡಿಸಿಕೊಳ್ಳುವುದರಿಂದ ಅವರು ಬಾಲ್ಯ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಧನಪಾಲ, ಸರ್ಕಾರಿ ಸಹಾಯಕ ಅಭಿಯೋಜಕ ಶ್ರೀಕಾಂತ್, ಕಾರ್ಯದರ್ಶಿ ಕೆ.ಶಂಕರ್ ಮಾತನಾಡಿದರು. ಕಾರ್ಮಿಕ ಇಲಾಖೆ ತಾಲೂಕು ನಿರೀಕ್ಷಕ ಮಂಜುನಾಥ್, ಮಾನಸ ವಿದ್ಯಾಸಂಸ್ಥೆಯ ಮಕ್ಕಳು ಭಾಗವಹಿಸಿದ್ದರು.