

ಸವಣೂರ: ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಲ್ಲಿ ಮಾತ್ರ ಬಾಲ ಕಾರ್ಮಿಕ ಪದ್ಧತಿಯನ್ನು ಬೇರು ಸಮೇತ ತೊಡೆದು ಹಾಕಲು ಸಾಧ್ಯ ಎಂದು ಜೆಎಂಎ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಎಸ್.ಎನ್., ಹೇಳಿದರು.
ತಾಲೂಕು ಆಡಳಿತ, ತಾಪಂ, ತಾಲೂಕು ಕಾನೂನು ಸೇವೆಗಳ ಸಮಿತಿ, ಶಾಲಾ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಆಶ್ರಯದಲ್ಲಿ ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಪ್ರಾಪ್ತರು ವಾಹನ ಚಲಾಯಿಸಬಾರದು. ಅಪರಾಧ ಕೃತ್ಯಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅವಶ್ಯವಿದೆ. ಅನಿವಾರ್ಯ ಇದ್ದರೂ ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸುವುದು ನಿಷಿದ್ಧ. ಆದ್ದರಿಂದ ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ತಹಸೀಲ್ದಾರ್ ಭರತರಾಜ್ ಕೆ.ಎನ್., ಸವಣೂರ ವೃತ್ತದ ಕಾರ್ಮಿಕ ನಿರೀಕ್ಷಕ ಮಹಾಂತೇಶ ಹಿರೇಮಠ, ವಕೀಲ ಎಸ್.ಬಿ. ಬಿಷ್ಠನಗೌಡ್ರ ಮಾತನಾಡಿದರು.
ತಾಪಂ ಇಒ ಬಿ.ಎಸ್. ಶಿಡೇನೂರ, ಪಿಎಸ್‌ಐ ರಂಗನಾಥ ಅಂತರಗಟ್ಟಿ, ಬಿಇಒ ಎಂ.ಎ್. ಬಾರ್ಕಿ ಇತರರು ಪಾಲ್ಗೊಂಡಿದ್ದರು.
ಬಳಿಕ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಜಾಥಾಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು.