ನಿನಗೇನೂ ಮಾಡುವುದಿಲ್ಲ ಎಂದಿದ್ದರು: ಸುರಕ್ಷಿತವಾಗಿ ಮನೆ ಸೇರಿದ ಬಾಲಕ ಅನುಭವ್ ಮಾತು

magu
Published on

ಬೆಳ್ತಂಗಡಿ: ನಾವು ನಿನ್ನ ತಂದೆಯ ಗೆಳೆಯರು, ನಿನಗೇನೂ ಮಾಡುವುದಿಲ್ಲ..

- ಅಪಹರಣಕ್ಕೊಳಗಾಗಿ ಇದೀಗ ಸುರಕ್ಷಿತವಾಗಿ ಮನೆ ಸೇರಿದ ಬಾಲಕ ಅನುಭವ್ ಮಾತಿದು.

ಅಪಹರಣ ಸಂದರ್ಭದ ಅನುಭವಗಳನ್ನು ಹಂಚಿಕೊಂಡ ಬಾಲಕ, ‘ತಂದೆಗೆ ಸರ್ಪ್ರೈಸ್ ನೀಡಲು ಈ ರೀತಿ ಮಾಡಿದ್ದೇವೆ. ಹೆದರುವುದು ಬೇಡ. ಆಡಲು ಹಲವು ವಸ್ತುಗಳನ್ನು ಕೊಡಿಸಿದರು. ತಿನ್ನಲು ಬೇರೆ ಬೇರೆ ತಿಂಡಿಗಳನ್ನೂ ಕೊಡಿಸಿದರು. ನನಗೆ ಭಯವಾಗುತ್ತಿತ್ತು. ತಾಯಿಯನ್ನು ನೋಡುವ ಆಸೆಯಾಗುತ್ತಿತ್ತು. ಕೆಲವು ಬಾರಿ ಅತ್ತೆ. ಅವರು ಬೇರೆ ಯಾವುದೇ ರೀತಿಯಲ್ಲಿ ಏನೂ ಮಾಡಲಿಲ್ಲ ಎಂದು ಹೇಳಿದ್ದಾನೆ.

ಇನ್ನೊಂದೆಡೆ, ಮಗನನ್ನು ಕಳೆದುಕೊಂಡು ಎರಡು ದಿನಗಳಿಂದ ಆತಂಕದಲ್ಲಿದ್ದ ಉಜಿರೆಯ ಶಿವನ್ ನಾಯರ್ ಅವರ ಮನೆಯಲ್ಲಿ ಈಗ ಮಗು ಹಿಂತಿರುಗಿದ ಬಳಿಕ ಸಂಭ್ರಮ ಮನೆ ಮಾಡಿದೆ. ತಮ್ಮ ನೋವಿಗೆ ಸ್ಪಂದಿಸಿದ ಪೊಲೀಸರಿಗೆ, ಊರವರಿಗೆ ಕೃತಜ್ಞತೆ ಸಲ್ಲಿಸುತ್ತಾ ಧೈರ್ಯ ತುಂಬಲು ಬಂದವರಿಗೆಲ್ಲ ಸಿಹಿ ಹಂಚಿ ಸಂಭ್ರಮಿ ಸುತ್ತಿದ್ದಾನೆ ಪುಟ್ಟ ಬಾಲಕ ಅನುಭವ್. ಬಂದವರರೆಲ್ಲರಲ್ಲಿ ಮಾತನಾಡುತ್ತಾ ತನ್ನ ಹಾಗೂ ಅಪಹರಣಕಾರರ ಬಗೆಗೆ ಅನುಭವಗಳನ್ನು ವಿವರಿಸುತ್ತಿದ್ದಾನೆ. ಭಾನುವಾರ ಬೆಳಗ್ಗೆಯಿಂದ ಸಂಬಂಧಿಕರು, ನೆರೆಮನೆಯವರು, ಪರಿಚಿತರು, ಊರವರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಬಾಲಕನ ಕುಟುಂಬಕ್ಕೆ ಧೈರ್ಯ ತುಂಬಿದರು.

ಕಣ್ಣ ಮುಂದೆಯೇ ಮಗುವನ್ನು ಅಪಹರಣಕಾರರು ಎಳೆದೊಯ್ಯುವುದನ್ನು ನೋಡಿ ಆದ ಭಯ, ನೋವು ಹೇಳತೀರದು ಎಂದು ಬಾಲಕನ ಅಜ್ಜ ಶಿವನ್ ನಾಯರ್ ಹೇಳಿದರು. ಈಗ ತೊಂದರೆಯಿಲ್ಲದೆ ಅವನನ್ನು ಮರಳಿ ಪಡೆಯಲು ಸಾಧ್ಯವಾಗಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪೊಲೀಸರು ಉತ್ತಮ ರೀತಿ ಕಾರ್ಯನಿರ್ವಹಿಸಿ ಅಪಾಯವಿಲ್ಲದೆ ಮಗುವನ್ನು ತಂದೊಪ್ಪಿಸಿದ್ದಾರೆ. ಅವರಿಗೆ ಧನ್ಯವಾದ ಎಂದರು.

ಕೋವಿಡ್ ಪರೀಕ್ಷೆ ನೆಗೆಟಿವ್: ಪೊಲೀಸ್ ವಶದಲ್ಲಿರುವ ಆರೋಪಿಗಳ ಕೋವಿಡ್-19 ತಪಾಸಣೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು 4 ದಿನ ಪೊಲೀಸ್ ಕಸ್ಟಡಿಗೆ

ಮಂಗಳೂರು: ಅಪಹರಣ ಪ್ರಕರಣದ ಆರೋಪಿಗಳನ್ನು ಭಾನುವಾರ ಬೆಳ್ತಂಗಡಿಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ನಿವಾಸಿಗಳಾದ ರಂಜಿತ್ (22), ಹನುಮಂತ್ (21), ಮೈಸೂರು ನಿವಾಸಿ ಗಂಗಾಧರ (25), ಬೆಂಗಳೂರಿನ ನಿವಾಸಿ ಕಮಲ್ (22), ಕೋಲಾರ ನಿವಾಸಿಗಳಾದ ಮಂಜುನಾಥ್ (24), ಮಹೇಶ್ (26) ಎಂಬವರನ್ನು ಬಂಧಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಅವರು ತನಿಖೆಗೆ 5 ತಂಡಗಳನ್ನು ರಚಿಸಿದ್ದರು. ತನಿಖಾ ತಂಡ ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಕೋಲಾರ ಜಿಲ್ಲೆ ಎಸ್ಪಿ ಕಾರ್ತಿಕ್ ಅವರ ಸಹಕಾರದೊಂದಿಗೆ ಆರೋಪಿಗಳನ್ನು ಡಿ.19ರಂದು ಬೆಳಗ್ಗಿನ ಜಾವ ಕೋಲಾರದ ಮಾಸ್ತಿಯಲ್ಲಿ ಬಂಧಿಸಿದೆ. ಮಗುವನ್ನು ಶನಿವಾರ ಹೆತ್ತವರಿಗೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿಗಳ ಬಂಧನವಾದರೆ ಅಪಹರಣದ ಹಿಂದಿನ ಸಂಚು ಬಯಲಾಗಲಿದೆ. ಬಿಜೋಯ್ ಕುಟುಂಬದ ಮಾಹಿತಿ ಇರುವಾತ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪ್ರಮುಖ ಆರೋಪಿ ಹಾಸನ ಜಿಲ್ಲೆಯವನು ಎನ್ನಲಾಗಿದ್ದು, ಅಲ್ಲಿಗೂ ಪೊಲೀಸರ ತಂಡ ತೆರಳಿದೆ. ಬಿಟ್‌ಕಾಯಿನ್ ವ್ಯವಹಾರವೇ ಅಪಹರಣಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net