ಅವಧಿ ಮುಗಿದ ಸಿರಪ್ ಕುಡಿದ ಮಗು ಅಸ್ವಸ್ಥ

24 HANUR 1
Published on

ಹನೂರು:ತಾಲೂಕಿನ ಉದ್ದನೂರು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ನೀಡಿದ ಅವಧಿ ಮುಗಿದ ಸಿರಪ್ ಕುಡಿದ ಪರಿಣಾಮ ಮಗು ಅಸ್ವಸ್ಥಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಜ್ಯೋತಿ ಮತ್ತು ಮಲ್ಲೇಶ್ ದಂಪತಿ ಜೂ.10 ರಂದು ಆಶಾ ಕಾರ್ಯಕರ್ತೆ ರಾಜಮಣಿ ಸಲಹೆ ಮೇರೆಗೆ ತನ್ನ 1.4 ವರ್ಷದ ಪುತ್ರ ಮಿಥನ್‌ಗೆ ವಿಟಮಿನ್ ಎ ಸಿರಪ್ ಕೊಡಿಸಲು ಅಂಗನವಾಡಿಗೆ ತೆರಳಿದ್ದರು. ಈ ವೇಳೆ ಕಾರ್ಯಕರ್ತೆ ವೈಶಾಲಿ ಅವರು ಜೂ.2022ಕ್ಕೆ ಅವಧಿ ಮುಕ್ತಾಯವಾಗಿದ್ದ ಸಿರಪ್ ಅನ್ನು ಮಗುವಿಗೆ ನೀಡಿದ್ದಾರೆ.

ಇದನ್ನು ಪಾಲಕರು ಕುಡಿಸಿದ ಪರಿಣಾಮ ರಾತ್ರಿ ವೇಳೆಗೆ ಮಗುವಿನ ಕಣ್ಣು ಹಳದಿ ಬಣ್ಣಕ್ಕೆ ತಿರುಗಿ ನೀರು ಸುರಿಯಲು ಪ್ರಾರಂಭಿಸಿದ್ದು, ಅಸ್ವಸ್ಥಗೊಂಡಿದೆ. ಇದರಿಂದ ಗಾಬರಿಗೊಂಡ ಪಾಲಕರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಸಲಹೆ ಪಡೆದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಆದರೆ ಇದುವರೆಗೂ ಚೇತರಿಕೆ ಕಂಡಿಲ್ಲ. ಹೀಗಾಗಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಶುಕ್ರವಾರ ಮಗುವಿನ ತಂದೆ ಮಲ್ಲೇಶ್ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅವಧಿ ಮುಗಿದ ಸಿರಪ್ ನೀಡಿದ ಪರಿಣಾಮ ಮಗು ಅಸ್ವಸ್ಥಗೊಂಡಿರುವ ಕುರಿತು ಮಾಹಿತಿ ಬಂದಿದೆ. ಅಂಗನವಾಡಿ ಕಾರ್ಯಕರ್ತೆಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಬಳಿಕ ಹೇಳಿಕೆ ಆಧರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು./ನಾಗೇಶ್ ಸಿಡಿಪಿಒ ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net