ಮಾಗಡಿ: ತಾಲೂಕಿನ ರಸ್ತೆಪಾಳ್ಯದ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ಮಂಗಳವಾರ ಟ್ರಾಕ್ಟರ್ ಹರಿದು ಗೋಕಾಕ್ ಮೂಲದ ಮಗುವೊಂದು ಮೃತಪಟ್ಟಿದೆ.
ಗೋಕಾಕ್ ತಾಲೂಕಿನ ಹಾಲದ ಕಟ್ಟಿ ಗ್ರಾಮದ ನಿವಾಸಿ ಪಕ್ಕೀರಪ್ಪ ಅವರ ಪುತ್ರ ಹನುಮಂತ (6) ಮೃತ ಮಗು.
ಪಕ್ಕೀರಪ್ಪ ಕುಟುಂಬ ಸೇರಿದಂತೆ 10 ಮಂದಿ ತಾಲೂಕಿನ ರಸ್ತೆಪಾಳ್ಯದ ಬಳಿ ಶೆೆಡ್ ಹಾಕಿಕೊಂಡು ಸುತ್ತಮುತ್ತಲ ಗ್ರಾಮಗಳಲ್ಲಿ ಮರಗೆಲಸ ಮಾಡುತ್ತಿದ್ದಾರೆ. ಎಂದಿನಂತೆ ಮಂಗಳವಾರವೂ ಪಕ್ಕೀರಪ್ಪ ರೈತರೊಬ್ಬರ ಹೊಲದಲ್ಲಿ ಮರ ಕೊಯ್ಯುವ ವೇಳೆ ಮರ ತುಂಬಲು ಬರುತ್ತಿದ್ದ ಟ್ರಾಕ್ಟರ್ಗೆ ಆಟವಾಡುತ್ತಿದ್ದ ಮಗು ಏಕಾಏಕಿ ಓಡಿ ಬಂದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಾಕ್ಟರ್ನ ಹಿಂಬದಿ ಚಕ್ರ ಹರಿದು ಗಂಭೀರಗಾಯಗೊಂಡಿದ್ದ ಮಗುವನ್ನು ಕೂಡಲೇ ಸೂಕ್ತ ಚಿಕಿತ್ಸೆಗಾಗಿ ಮಾಗಡಿ ರ್ಸಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದೆ.
ಗೋಕಾಕ್ ತಾಲೂಕಿನ ಹಾಲದ ಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ದಸರಾ ರಜೆಯ ಕಾರಣ ಸೋಮವಾರ ರಸ್ತೆಪಾಳ್ಯದ ತನ್ನ ತಂದೆಯ ಮನೆಗೆ ಬಂದಿದ್ದ ಎನ್ನಲಾಗಿದೆ. ಕುದೂರು ಪೋಲೀಸ್ ಠಾಣೆಯಲ್ಲಿ ಮೃತ ಬಾಲಕನ ತಂದೆ ಪಕ್ಕೀರಪ್ಪ ದೂರು ದಾಖಲಿಸಿದ್ದಾರೆ.