

ಗುಂಡ್ಲುಪೇಟೆ: ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆದೊಯ್ದಿದ್ದ ಆರು ತಿಂಗಳ ಹೆಣ್ಣು ಮಗುವಿಗೆ ವೈದ್ಯರು ಲೋಕಲ್ ಅನೆಸ್ತೇಷಿಯಾ ಕೊಟ್ಟ ಕೂಡಲೇ ಫಿಟ್ಸ್‌ನಿಂದ ಸಾವಿಗೀಡಾಗಿದೆ. ಸಾವಿಗೆ ವೈದ್ಯರೇ ಕಾರಣ ಎಂದು ಸಂಬಂಧಿಕರು ಆಕ್ರೋಶವ್ಯಕ್ತಪಡಿಸಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಹಂಗಳ ಗ್ರಾಮದ ಆನಂದ್ ಸೋಮವಾರ ತನ್ನ ಪತ್ನಿ ಶುಭ ಮಾನಸಾ ಅವರ ತವರು ಗ್ರಾಮ ಶೆಟ್ಟಹಳ್ಳಿಯಿಂದ ತಮ್ಮ ಆರು ತಿಂಗಳ ಮಗುವಿಗೆ ಕಿವಿ ಚುಚ್ಚಿಸಲು ಬೊಮ್ಮಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ವೈದ್ಯ ಡಾ.ನಾಗರಾಜು ಮಗುವಿಗೆ ಕಿವಿ ಚುಚ್ಚಲು ಲೋಕಲ್ ಅನೆಸ್ತೇಷಿಯಾ ಕೊಟ್ಟ ಕೂಡಲೇ ಹಸುಳೆ ಜೋರಾಗಿ ಕೈಕಾಲು ಬಡಿಯಲಾರಂಭಿಸಿತು. ಇದರಿಂದ ಗಾಬರಿಯಾದ ವೈದ್ಯರು ಕೂಡಲೇ ಮಗುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ನರ ಬಳಿಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿ ಕಳಿಸಿದರು.
ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮಗು ಸಾವಿಡೀಡಾಗಿದೆ. ಹಸುಳೆಯ ಸಾವಿನಿಂದ ದಿಕ್ಕೆಟ್ಟ ಪಾಲಕರ ಆಕ್ರಂದನ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಎಲ್ಲರ ಮನಕಲಕುವಂತಿತ್ತು. ವಿಷಯ ತಿಳಿದ ಸಂಬಂಧಿಕರು ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಸುಳೆಯ ಎರಡೂ ಕಿವಿಗಳಿಗೆ ಹೈಡೋಸ್ ಇಂಜೆಕ್ಷನ್ ನೀಡಿ ಮಗುವಿನ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಮ್ಮ ಮಗುವಿನ ಸಾವಿಗೆ ವೈದ್ಯರೇ ಕಾರಣ ಎಂದು ಪಾಲಕರು ಹಾಗೂ ಸಂಬಂಧಿಕರು ದೂರಿದ್ದಾರೆ. ಆದ್ದರಿಂದ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ ಕಾರಣ ಕಂಡುಕೊಳ್ಳಲಾಗುವುದು. ಹಸುಳೆಗೆ ನೋವಾಗದಂತೆ ಮಾಡಲು ಇಂಜೆಕ್ಷನ್ ನೀಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡುಬಂದರೆ ಕಾನೂನಿನಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಶಾ ವಿಜಯವಾಣಿಗೆ ತಿಳಿಸಿದ್ದಾರೆ.