ಮೊದಲ ದಿನವೇ 103 ಬಸ್​ಗಳಲ್ಲಿ ಸಂಚರಿಸಿದ್ದು 3044 ಪ್ರಯಾಣಿಕರು

web 2
Published on

ಚಿಕ್ಕಮಗಳೂರು: ನಗರದಿಂದ ಮಂಗಳವಾರ ಬೆಂಗಳೂರಿಗೆ 11 ಬಸ್​ಗಳು ತೆರಳಿದರೆ, ಬೆಂಗಳೂರಿನಿಂದ 9 ಬಸ್​ಗಳು ಆಗಮಿಸಿದವು. ಬಸ್ ಸಂಚಾರ ಆರಂಭವಾದ್ದರಿಂದ ನಿಗಮದ ನೌಕರರು, ಪ್ರಯಾಣಿಕರಲ್ಲಿ ಲವಲವಿಕೆ ಕಂಡುಬಂತು.

ಹಾಸನ, ಶಿವಮೊಗ್ಗಕ್ಕೆ ತಲಾ ಮೂರು ಬಸ್​ಗಳು ನಗರದಿಂದ ಹೋದವು. ಹೊರ ಜಿಲ್ಲೆಗಳು ಹಾಗೂ ಸ್ಥಳೀಯವಾಗಿ 103 ಬಸ್​ಗಳು ಸಂಚರಿಸಿದ್ದರೆ, 3044 ಮಂದಿ ಪ್ರಯಾಣ ಮಾಡಿದರು.

ಬಸ್ ಸಂಚಾರದ ಮಾಹಿತಿ ತಿಳಿಯುತ್ತಿದ್ದಂತೆ ಸೋಮವಾರದಿಂದಲೇ ಕಾತರರಾಗಿದ್ದ ಪ್ರಯಾಣಿಕರು ನಗರದ ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಹೊರದ್ವಾರದಲ್ಲೇ ಸಿಬ್ಬಂದಿ ಸ್ಯಾನಿಟೈಸರ್ ಹಾಕಿ ಒಳಬಿಡುತ್ತಿದ್ದರು. ಬಸ್ ಹತ್ತಲು ಸಾಲಿನಲ್ಲಿ ನಿಂತು ತಮ್ಮ ಗುರುತಿನ ಚೀಟಿ ತೋರಿಸಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ ವಾಹನವನ್ನೇರುತ್ತಿದ್ದರು.

ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಬಿಡುತ್ತಿದ್ದ ಸಿಬ್ಬಂದಿ ನಂತರ ಎರಡು ಸೀಟುಗಳಲ್ಲಿ ಒಬ್ಬರು, ಮೂರು ಸೀಟುಗಳಲ್ಲಿ ಇಬ್ಬರನ್ನು ಕುಳಿತುಕೊಳ್ಳಲು ಅವಕಾಶ ನೀಡಿದರು. ನಿರ್ವಾಹಕರು ಎಲ್ಲರ ಮಾಸ್ಕ್ ಅನ್ನು ಪರಿಶೀಲಿಸಿ ಟಿಕೆಟ್ ವಿತರಿಸಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಬಸ್​ಗಳಿಗೆ ಏರಿ ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಧರಿಸುವ ಕುರಿತು ಎಲ್ಲರಿಗೂ ಮಾಹಿತಿ ನೀಡಿದರು. ಮಾರ್ಗಮಧ್ಯೆ ಉಗುಳಬಾರದು, ಬಸ್​ನಿಂದ ಇಳಿಯಬಾರದು. ಚಿಕ್ಕಮಗಳೂರಿನಿಂದ ಹೊರಟ ಬಸ್ಸನ್ನು ಬೆಂಗಳೂರಿನಲ್ಲೇ ನಿಲ್ಲಿಸುವುದು ಎಂದು ತಿಳಿಸಿದರು.

ಬೆಂಗಳೂರು ಮಾರ್ಗದ ಬಸ್​ಗಳು ಆರಂಭದಲ್ಲೇ ಅರ್ಧ ಗಂಟೆಗೊಂದರಂತೆ ನಿಗದಿತ ತಲಾ 30 ಪ್ರಯಾಣಿಕರೊಂದಿಗೆ ಮಧ್ಯಾಹ್ನದ ವೇಳೆಗೆ 11 ವಾಹನಗಳು ಸಾಗಿದವು. ಅಧಿಕಾರಿಗಳಾದ ಬಿ.ಎಸ್.ರಮೇಶ್, ಬೇಬಿಬಾಯಿ, ನಿಲ್ದಾಣಾಧಿಕಾರಿ ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net