ಕೋಡಿ ಬಿದ್ದ ಚಿಕ್ಲಿಹೊಳೆ

Chiklihola where Kodi fell
Published on

ಮಡಿಕೇರಿ:

ಕಾವೇರಿ ಕಣಿವೆಯ ಚಿಕ್ಕ ಜಲಾಶಯಗಳಲ್ಲಿ ಒಂದಾಗಿರುವ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿ ಆಗಿದ್ದು, ಕೋಡಿ ಬೀಳಲಾರಂಭಿಸಿದೆ. ವಿಶೇಷ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟೆ ತುಂಬಿದಾಗ ಅರ್ಧಚಂದ್ರಾಕತಿಯ ಕಟ್ಟೆಯ ಮುಖಾಂತರ ನೀರು ಹೊರಬೀಳುವ ದಶ್ಯ ನಯನ ಮನೋಹರವಾಗಿರುತ್ತದೆ. ಬೇಸಿಗೆಯಲ್ಲಿ ಖಾಲಿ ಜಲಾಶಯ ನೋಡಿ ನಿರಾಸೆಯಿಂದ ಮರಳುತ್ತಿದ್ದವರಿಗೆ ಈಗ ಮಳೆರಾಯನ ಕೃಪೆಯಿಂದ ಇಲ್ಲಿ ಕಣ್ಣಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಜೂನ್ ಮಧ್ಯಭಾಗದ ನಂತರ ಭರ್ತಿ ಆಗುತ್ತಿದ್ದ ಚಿಕ್ಲಿಹೊಳೆ ಜಲಾಶಯ ಈ ವರ್ಷ ಭರ್ತಿ ಆಗಲು ಆರಿದ್ರಾ ಮಳೆಯೇ ಬರಬೇಕಾಯಿತು. ಕಳೆದ ೪-೫ ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ನೀರಿನ ಹರಿವು ಹೆಚ್ಚಳವಾದ ಕಾರಣ ಸೋಮವಾರ ರಾತ್ರಿ ವೇಳೆಗೆ ಭರ್ತಿ ಆಗಿ, ಮಂಗಳವಾರ ಬೆಳಗ್ಗೆಯಿಂದ ಕೋಡಿ ಬೀಳುತ್ತಿದೆ. ರಂಗಸಮುದ್ರ, ನಂಜರಾಯಪಟ್ಟಣ, ಹೊಸಪಟ್ಟಣ, ಗುಡ್ಡೆಹೊಸೂರು, ಗೊಂದಿಬಸವನಹಳ್ಳಿ ವ್ಯಾಪ್ತಿಯ ೨,೧೩೭ ಎಕರೆ ಜಮೀನಿಗೆ ನೀರೊದಗಿಸುವ ಉದ್ದೇಶದಿಂದ ೧೯೭೭-೭೯ರ ಅವಧಿಯಲ್ಲಿ ಚಿಕ್ಲಿಹೊಳೆ ಜಲಾಶಯ ನಿರ್ಮಿಸಲಾಯಿತು. ಇದಕ್ಕೆ ಯಾವುದೇ ಕ್ರೆಸ್ಟ್‌ಗೇಟ್ ಇಲ್ಲ. ಜಲಾಶಯ ಭರ್ತಿ ಆದಾಗ ಅರ್ಧಚಂದ್ರಾಕತಿಯ ಕಟ್ಟೆಯ ಮುಖಾಂತರ ನೀರು ಹೊರಬಿದ್ದು ನದಿ ಸೇರುತ್ತದೆ. ಕಾಲುವೆಗಳಿಗೆ ನೀರು ಹರಿಸಲು ಮಾತ್ರ ಇಲ್ಲಿ ಗೇಟ್ ವ್ಯವಸ್ಥೆ ಇದೆ.

ಕುಶಾಲನಗರ ತಾಲೂಕು ರಂಗಸಮುದ್ರದಲ್ಲಿ ಇರುವ ಚಿಕ್ಲಿಹೊಳೆ ಜಲಾಶಯ ೪೬೪.೮ ಮೀ. ಉದ್ದವಿದ್ದು. ೨೫.೩ ಮೀ. ಎತ್ತರ ಹೊಂದಿದೆ. ಅರ್ಧ ಟಿಎಂಸಿ ನೀರು ಸಂಗ್ರಹಿಸಬಹುದಾದ ಅಣೆಕಟ್ಟೆಯನ್ನು ಮಣ್ಣು ಮತ್ತು ಕಲ್ಲಿನಿಂದಲೇ ಕಟ್ಟಿರುವುದು ವಿಶೇಷ. ಚಿಕ್ಲಿಹೊಳೆ ತುಂಬಿದಾಗ ಹೊರಹರಿಯುವ ನೀರು ಕಾವೇರಿ ನದಿಯನ್ನು ಸೇರುತ್ತದೆ. ಕಷಿ ಉದ್ದೇಶಕ್ಕಾಗಿ ಈ ಅಣೆಕಟ್ಟೆಯನ್ನು ನಿರ್ಮಿಸಲಾಗಿದ್ದರೂ ಇದರ ಗರಿಷ್ಠ ಉಪಯೋಗ ಕೃಷಿಕರಿಗೆ ಆಗುತ್ತಿಲ್ಲ. ೧೯೮೨ರಲ್ಲಿ ಜಲಾಶಯ ಅಧಿಕತವಾಗಿ ಕಾರ್ಯಾರಂಭ ಮಾಡಿದೆ. ಆದರೆ ಇಲ್ಲಿಯ ತನಕ ನಿಗದಿತ ಪ್ರದೇಶಕ್ಕೆ ನೀರು ತಲುಪಿಸಲು ಸಾಧ್ಯವಾಗಿಲ್ಲ.

ಕಾವೇರಿ ನೀರಾವರಿ ನಿಗಮದ ಪಾಲಿಗೆ ಈ ಜಲಾಶಯ ಬಿಳಿಯಾನೆಯಂತಾಗಿದೆ ಎನ್ನುವುದು ಸಾಮಾನ್ಯ ಆರೋಪ. ನಿರ್ವಹಣೆ ಹೆಸರಿನಲ್ಲಿ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಹಣ ಇಲ್ಲಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಲಾಗುತ್ತದೆ. ಮೇಲ್ನೋಟಕ್ಕೆ ಎದ್ದು ಕಾಣುವಂತೆ ಸುಣ್ಣ-ಬಣ್ಣ ಹೊಡೆಯುವುದನ್ನು ಬಿಟ್ಟರೆ ಬೇರೇನೂ ಕೆಲಸ ಇಲ್ಲಿ ನಡೆಯುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಕಾಲುವೆಗಳ ನಿರ್ವಹಣೆಯಲ್ಲಿ ದಿವ್ಯ ನಿರ್ಲಕ್ಷ್ಯ ತೋರಿಸುವುದರಿಂದ ರಂಗಸಮುದ್ರ ಗ್ರಾಮದ ಜಮೀನುಗಳಿಗೂ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ.

ಚಿಕ್ಲಿಹೊಳೆಗೆ ಸಂಬಂಧಿಸಿದ ಕಚೇರಿಗಳು ರಂಗಸಮುದ್ರದಲ್ಲೇ ಇದ್ದಾಗ ಅಣೆಕಟ್ಟೆ ನಿರ್ವಹಣೆ ಸ್ವಲ್ಪಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೆ ೨ ದಶಕಗಳ ಹಿಂದೆ ಇಲ್ಲಿನ ಆಡಳಿತವನ್ನು ಹಾರಂಗಿ ಯೋಜನೆ ಜೊತೆ ವಿಲೀನ ಮಾಡಲಾಗಿದ್ದು, ಕಚೇರಿ ಕಟ್ಟಡಗಳು ಪಾಳುಬಿದ್ದವೆ. ಉಸ್ತುವಾರಿ ಹೊತ್ತ ಅಧಿಕಾರಿಗಳು ಕುಶಾಲನಗರ ಸೇರಿಕೊಂಡ ಮೇಲೆ ಜಲಾಶಯ ಅನಾಥವಾಗಿದೆ. ನಿರ್ವಹಣೆಗೆ ವಾರ್ಷಿಕವಾಗಿ ಅನುದಾನಗಳು ಬಿಡುಗಡೆ ಆಗುತ್ತಿರುವ ಬಗ್ಗೆ ದಾಖಲಾತಿಗಳಿದ್ದರೂ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗೇ ಉಳಿದಿದೆ ಎನ್ನುತ್ತಾರೆ ಸ್ಥಳೀಯ ರೈತರು.

ಮತ್ತೊಂದು ಕಡೆ ಚಿಕ್ಲಿಹೊಳೆ ಜಲಾಶಯ ಜಿಲ್ಲೆಯ ಪ್ರಮುಖ ತಾಣಗಳ ಪಟ್ಟಿಯಲ್ಲಿದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ಕೂಡ ವಿಫಲವಾಗಿದೆ. ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಲಿಹೊಳೆ ಜಲಾಶಯದಲ್ಲಿ ಪ್ರವಾಸೋದ್ಯಮ ಅಭಿವದ್ಧಿಗೂ ಬೇಕಾದಷ್ಟು ಅವಕಾಶಗಳಿದೆ. ಕೇರಳದ ಬಾಣಾಸುರ ಅಣೆಕಟ್ಟೆ ಮಾದರಿಯಲ್ಲಿ ಇಲ್ಲಿ ಪ್ರವಾಸಿ ಆಕರ್ಷಣೆಗಳನ್ನು ರೂಪಿಸಬಹುದಾಗಿದ್ದರೂ ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳಲ್ಲಿ ಆಸಕ್ತಿ, ದೂರದಷ್ಟಿ ಕೊರತೆಯಿಂದ ಮಳೆಗಾಲದಲ್ಲಿ ಕೋಡಿ ಬೀಳುವುದನ್ನು ಕಣ್ತುಂಬಿಸಿಕೊಳ್ಳಬಹುದೇ ಹೊರತು ಬೇರೇನೂ ನೋಡುವುದಕ್ಕೆ ಸಿಗುವುದಿಲ್ಲ. ಇಲ್ಲೊಂದು ಸಾಕಾನೆ ಶಿಬಿರ ಆರಂಭಿಸುವ ಯೋಜನೆ ಇತ್ತಾದರೂ ಸ್ಥಳೀಯರ ವಿರೋಧದಿಂದಾಗಿ ಅದು ಹಾರಂಗಿಗೆ ಹೋಗಿದೆ.

ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದ್ದು ಮಂಗಳವಾರದಿಂದ ಕೋಡಿ ಬೀಳಲಾರಂಭಿಸಿದೆ. ಈ ಅಕರ್ಷಕ ದೃಶ್ಯ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರೈತರ ಕೃಷಿ ಜಮೀನುಗಳಿಗೆ ಈ ತಿಂಗಳ ಮಧ್ಯಭಾಗದ ನಂತರ ನೀರು ಹರಿಸಲಾಗುವುದು. ಜಲಾಶಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು, ರೈತ ಸ್ನೇಹಿಯಾಗಿ ರೂಪಿಸಲು ಹಾಗೂ ಪ್ರವಾಸಿ ತಾಣವಾಗಿ ಆಕರ್ಷಣೆ ಹೆಚ್ಚಿಸಲು ಯೋಜನೆ ಹಮ್ಮಿಕೊಳ್ಳಲಾಗಿದ್ದು, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಇದೆ.
ಡಿ.ಡಿ. ಕಿರಣ್, ಉಸ್ತುವಾರಿ ಅಭಿಯಂತರ, ಚಿಕ್ಲಿಹೊಳೆ ಜಲಾಶಯ

ಚಿಕ್ಲಿಹೊಳೆ ಜಲಾಶಯದಿಂದ ನಮ್ಮ ಭಾಗದ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ನೀರು ರೈತರ ಜಮೀನುಗಳಿಗೆ ಹರಿಯುತ್ತಿಲ್ಲ. ಪ್ರತಿ ವರ್ಷ ಕಾಲುವೆಗಳಿಂದ ಹೂಳು ಕೂಡ ತೆಗೆಯುವುದಿಲ್ಲ. ರೈತರಿಗೆ ಉಪಯೋಗಕ್ಕೆ ಲಭ್ಯವಿರದ ಈ ಜಲಾಶಯವನ್ನು ಪ್ರವಾಸಿ ಆಕರ್ಷಣೆ ದೃಷ್ಟಿಯಿಂದಾದರೂ ಅಭಿವೃದ್ಧಿಪಡಿಸುವಂತಾಗಲಿ. ಪ್ರವಾಸೋದ್ಯಮ ಬೆಳವಣಿಗೆಗೆ ಇಲ್ಲಿ ಸಾಕಷ್ಟು ಅವಕಾಶಗಳಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿ.
ಸಿ.ಎಲ್. ವಿಶ್ವ, ಅಧ್ಯಕ್ಷ, ನಂಜರಾಯಪಟ್ಟಣ ಗ್ರಾ.ಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net