

ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲೂಕಿನ ಲೋಕೂರ ಗ್ರಾಮದ ಸಿದ್ಧಾಂತ ನಾಯಿಕಬಾ ಗಡಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್ ಪಡೆದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಕಾಗವಾಡ ತಾಲೂಕಿನ ಶೇಡಬಾಳದ ಆಚಾರ್ಯ ಸುಬಲಸಾಗರ ಪ್ರೌಢ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿಯಾದ ಸಿದ್ದಾಂತ, ಇಂಗ್ಲಿಷ್ ವಿಷಯದಲ್ಲಿ 99 ಹಾಗೂ ಉಳಿದೆಲ್ಲ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದು ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾನೆ. ವಿದ್ಯಾರ್ಥಿಯ ತಂದೆ-ತಾಯಿ ಕೃಷಿಕರಾಗಿದ್ದು, ನಾಲ್ಕೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಪಿಯುಸಿ ಸೈನ್ಸ್ ವ್ಯಾಸಂಗ ಕೈಗೊಂಡು ಬಳಿಕ ಇಂಜಿನಿಯರಿಂಗ್ ಕಲಿಯುತ್ತೇನೆ. ಯುಪಿಎಸ್‌ಸಿ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುತ್ತೇನೆಂದು ವಿಜಯವಾಣಿಗೆ ಸಿದ್ಧಾಂತ ಪ್ರತಿಕ್ರಿಯೆ ನೀಡಿದ್ದಾನೆ. ಸಿದ್ಧಾಂತಗೆ ಇಬ್ಬರು ಸಹೋದರಿಯರಿದ್ದು, ಈ ಪೈಕಿ ಶ್ರುತಿ ಪಿಯುಸಿ ಸೈನ್ಸ್‌ನಲ್ಲಿ ಶೇ. 90 ಪಡೆದು ನೀಟ್ ಪರೀಕ್ಷೆ ಬರೆದಿದ್ದಾರೆ. ಮತ್ತೊಬ್ಬ ಸಹೋದರಿ ಪ್ರೀತಿ ಬಿಎಂಎಸ್ ಓದುತ್ತಿದ್ದಾರೆ.