ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಮೈಸೂರಿನಲ್ಲಿ ಸನ್ಮಾನ

18
Published on

ಮೈಸೂರು: ಬೆಳಗಾವಿಯ ಚಿಕ್ಕೋಡಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ನಗರದಲ್ಲಿ ಸೋಮವಾರ ಸನ್ಮಾನಿಸಲಾಯಿತು.
ರೈಲ್ವೆ ನಿಲ್ದಾಣದ ಬಳಿ ಇರುವ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಿಯಾಂಕಾ ಜಾರಕಿಹೊಳಿ ಅವರು, ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನತೆ, ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಚಿಕ್ಕೋಡಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಹಲವಾರು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಒತ್ತು ನೀಡಲಾಗುವುದು. ವಿದ್ಯುತ್, ನೀರು ಹಾಗೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ತಮ್ಮ ತಂದೆಯವರಂತೆ ಜನ ಸಾಮಾನ್ಯರ ಕೆಲಸಗಳನ್ನು ಮುಂದುವರಿಸಬೇಕು. ನೂತನವಾಗಿ ಆಯ್ಕೆಯಾಗಿರುವ ಪ್ರಿಯಾಂಕಾ ಅವರು ಸಂಸತ್ತಿನಲ್ಲಿ ಮಹಿಳೆಯರ ದನಿಯಾಗಲಿ. ಪಕ್ಷ ಸಂಘಟನೆಗೂ ಶ್ರಮಿಸಲಿ ಎಂದು ಕೋರಿದರು.
ಮುಖ್ಯಮಂತ್ರಿಗಳ ತವರಿನಲ್ಲಿ ಲೋಕಸಭೆ ಮತ್ತು ವಿಧಾನಪರಿಷತ್ತಿನ ಚುನಾವಣೆ ಸೋಲು ಕಷ್ಟಕರವಾಗಿದ್ದು, ಸಿದ್ದರಾಮಯ್ಯ ಅವರಿಗೆ ಮುಖ ತೋರಿಸುವುದೇ ಕಷ್ಟವಾಗಿದೆ. ಮುಂದೆ ಕಾರ್ಯಕರ್ತರು ಶ್ರಮವಹಿಸಿ ಎಲ್ಲ ಚುನಾವಣೆಗಳಲ್ಲಿಯೂ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಅತ್ಯಂತ ಕಿರಿಯ ಶಾಸಕನಾಗಿ ಆಯ್ಕೆಯಾಗಿದ್ದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅತ್ಯಂತ ಕಿರಿಯ ಸಂಸದೆಯಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಉತ್ತಮ ಭವಿಷ್ಯ ಇದೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಪುಷ್ಪಲತಾ ಚಿಕ್ಕಣ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮುಖಂಡ ರಾಹುಲ್ ಜಾರಕಿಹೊಳಿ, ಈಶ್ವರ್ ಚಕ್ಕಡಿ, ಸೇವಾದಳದ ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net