ತಾಯಿ ಮಕ್ಕಳ ಆಸ್ಪತ್ರೆಗೂ ತಟ್ಟಿದ ನೀರಿನ ಬಿಸಿ!

22Anand1
Published on

ಆನಂದ ಭಮ್ಮನ್ನವರ ಚಿಕ್ಕೋಡಿ

ಬೇಸಿಗೆ ಮುನ್ನವೇ ಈ ಬಾರಿ ಬಿಸಿಲಿನ ಪ್ರಖರತೆ ಅಧಿಕವಾಗಿರುವುದರಿಂದ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಇದರಿಂದ ಕೆರೆ, ಬಾವಿ, ಬೋರ್‌ವೆಲ್‌ಗಳು ಬರಿದಾಗುತ್ತಾ ಸಾಗಿವೆ. ಇದರ ಪರಿಣಾಮ ಚಿಕ್ಕೋಡಿ ತಾಯಿ-ಮಕ್ಕಳ ಆಸ್ಪತ್ರೆಗೂ ತಟ್ಟಿದ್ದರಿಂದ ಬಾಣಂತಿಯರು, ಚಿಕಿತ್ಸೆಗೆಂದು ಬಂದವರು ನೀರಿಗಾಗಿ ಪರದಾಟ ಅನುಭವಿಸುವಂತಾಗಿದೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ಬೋರ್‌ವೆಲ್ ಇದೆ. ಬೇಸಿಗೆ ಇರುವುರಿಂದ ಈ ಬೋರ್‌ವೆಲ್‌ನಲ್ಲಿ ಇದೀಗ ಅಂತರ್ಜಲಮಟ್ಟ ಕುಸಿತ ಕಂಡಿದ್ದರಿಂದ ನೀರು ಸಮರ್ಪಕವಾಗಿ ದೊರೆಯದೇ ತೊಂದರೆಯಾಗುತ್ತಿದೆ. ರೋಗಿಗಳಿಗೆ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೂ ಬರ ಉಂಟಾಗಿದೆ. ನಿತ್ಯ 150-200 ಹೊರ ರೋಗಿಗಳು ಮತ್ತು 10 ರಿಂದ 20 ಒಳ ರೋಗಿಗಳು ಇರುತ್ತಾರೆ. 40 ಜನ ನೌಕರರು ಇದ್ದಾರೆ. ಇಲ್ಲಿ ಪ್ರತಿದಿನ ರೋಗಿಗಳ ಸ್ನಾನ, ಶೌಚಾಲಯ, ಅಡುಗೆ, ಬಟ್ಟೆ ತೊಳೆಯಲು ಇಲ್ಲಿರುವ ಒಂದೇ ಕೊಳವೆ ಬಾವಿ ನೀರನ್ನೇ ಬಳಸಲಾಗುತ್ತಿದೆ. ಹೀಗಾಗಿ ಇದೀಗ ನೀರು ಸಾಕಷ್ಟು ಸಿಗದೇ ರೋಗಿಗಳು, ಬಾಣಂತಿಯರು, ಸಂಬಂಧಿಕರು ತೊಂದರೆ ಪಡುತ್ತಿದ್ದಾರೆ.

ಬೇರೆ ಜಲಮೂಲವೂ ಇಲ್ಲ: ಇಲ್ಲಿ ಬೇರೆ ಮೂಲಗಳಿಂದ ನೀರು ಒದಗಿಸಬೇಕು ಎಂದರೆ ಆಸ್ಪತ್ರೆ ಹೊರ ಭಾಗದಲ್ಲಿ ಇದೆ. ಹೀಗಾಗಿ ನೀರನ್ನು ಪೈಪ್‌ಲೈನ್ ಮೂಲಕ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಇಲ್ಲವಾದರೆ ಇಲ್ಲಿಯೇ ಇನ್ನೊಂದು ಬೋರ್‌ವೆಲ್ ಹಾಕಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಮೂಲಸೌಕರ್ಯವೂ ಇಲ್ಲ: ಬಡ ಜನರಿಗೆ ಅನುಕೂಲವಾಗಲೆಂದು ಆರಂಭಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಆಸ್ಪತ್ರೆಗೆ ಚಿಕಿತ್ಸೆಗೆ ರೋಗಿಗಳು ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಆಸ್ಪತ್ರೆಗೆ ಆಗಮಿಸುವವರಿಗೆ ಕುಡಿಯುವ ನೀರು, ಸಾರಿಗೆ ವ್ಯವಸ್ಥೆ ಸೇರಿದಂತೆ ಆಸ್ಪತ್ರೆಯಲ್ಲಿ ಹತ್ತಾರು ಸಮಸ್ಯೆಗಳು ತಾಂಡವಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಗಡಿಭಾಗದ ಜನರು ಆರೋಗ್ಯ ಸೇವೆಗಾಗಿ ನೆರೆ ಮಹಾರಾಷ್ಟ್ರದ ಆಸ್ಪತ್ರೆಗಳ ಅವಲಂಬನೆ ತಪ್ಪಿಸಲು ಚಿಕ್ಕೋಡಿ ಪಟ್ಟಣದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಿಸಲಾಗಿದೆ. ಆದರೆ, ಇಲ್ಲಿ ಒಂದೇ ಬೋರ್‌ವೆಲ್ ಇರುವುರಿಂದ ನೀರಿನ ಸಮಸ್ಯೆಯೊಂದಿಗೆ ಮೂಲಸೌಕರ್ಯಗಳು ಇಲ್ಲದೇ ಜನರಿಗೆ ತೊಂದರೆ ಉಂಟಾಗುತ್ತಿದೆ. ಇನ್ನಾದರೂ ಸಂಬಂಧಟಪ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಆಸ್ಪತ್ರೆಗೆ ನೀರಿನ ವ್ಯವಸ್ಥೆಯೊಂದಿಗೆ ಇತರ ಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಆಸ್ಪತ್ರೆಗಿಲ್ಲ ಸಾರಿಗೆ ವ್ಯವಸ್ಥೆ

ಚಿಕ್ಕೋಡಿ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 3 ಕಿಮೀ ದೂರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಈ ಮಾರ್ಗವಾಗಿ ಸಾರಿಗೆ ಬಸ್ ದಿನಕ್ಕೆ ಎರಡು ಬಾರಿ ಮಾತ್ರ ಓಡಾಡುತ್ತದೆ. ಇಲ್ಲವಾದರೇ ಖಾಸಗಿ ವಾಹನವೇ ಗತಿ. ಆಸ್ಪತ್ರೆಗೆ ಚಿಕ್ಕೋಡಿ, ರಾಯಬಾಗ, ಹುಕ್ಕೇರಿ ತಾಲೂಕಿನ ಜನರು ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ ಸೂಕ್ತ ಸಾರಿಗೆ ಬಸ್ ಇಲ್ಲದೇ ಬಾಣಂತಿಯರು, ಮಕ್ಕಳು ಕಾಲ್ನಡಿಗೆ ಅಥವಾ ದುಡ್ಡು ಕೊಟ್ಟು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಆಗಮಿಸಬೇಕಿದೆ.

ಚಿಕ್ಕೋಡಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗಾಗಿ ಈಗಾಗಲೇ ಇರುವ ಒಂದು ಕೊಳವೆ ಬಾವಿಯ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕದ ಮುಖಾಂತರ ಬಳಸಲಾಗುತ್ತಿದೆ. ಆಸ್ಪತ್ರೆಗೆ ಪೈಪ್‌ಲೈನ್ ಮುಖಾಂತರ ನೀರು ಸರಬರಾಜು ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ಬಸ್ ವ್ಯವಸ್ಥೆಗೆ ಸಾರಿಗೆ ಇಲಾಖೆ ಅಧಿಕಾರಿಗೆ ಪತ್ರ ಬರೆಯಲಾಗಿದೆ. ಡಾ.ಸುಕುಮಾರ ಬಾಗಾಯಿ, ಟಿಹೆಚ್‌ಒ ಚಿಕ್ಕೋಡಿ. -- ಚಿಕ್ಕೋಡಿ ತಾಯಿ ಮಕ್ಕಳ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಕೂಡಲೇ ಒದಗಿಸಬೇಕು. ಬೇಸಿಗೆ ಇರುವುದರಿಂದ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಕಾಡಗೌಡ ಪಾಟೀಲ, ಜೆಡಿಎಸ್ ಯುವ ಘಟಕ ಅಧ್ಯಕ್ಷ, ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net