ಚಿಕ್ಕೋಡಿ ಸರ್ವತೋಮುಖ ಪ್ರಗತಿಗೆ ಒತ್ತು

28Ckd5
Published on

ಚಿಕ್ಕೋಡಿ: ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಹೆಚ್ಚಿನ ವಿಷಯಗಳ ಕುರಿತು ಪುರಸಭೆ ಸದಸ್ಯರು ಮಾಹಿತಿ ನೀಡಿದರೆ ಆಯವ್ಯಯದಲ್ಲಿ ಸೇರಿಸಿಕೊಳ್ಳಲಾಗುವುದು. ಒಟ್ಟಿನಲ್ಲಿ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಿದೆ ಎಂದು ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಹೇಳಿದರು.

ಇಲ್ಲಿನ ಪುರಸಭೆಯ ನೂತನ ಕಟ್ಟಡದ ಸಭಾಭವನದಲ್ಲಿ ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿ, ಆಯವ್ಯಯದಲ್ಲಿ ಪುರಸಭೆ ವಿವಿಧ ರೀತಿಯ 7,52,96,900 ರೂ. ಆದಾಯ ನಿರೀಕ್ಷೆ ಮಾಡಿದ್ದು, ಪುರಸಭೆಯ ಖರ್ಚು 7,48,81,050 ರೂ. ಸೇರಿ ಒಟ್ಟು 4,15,850 ರೂ. ನಿವ್ವಳ ಆದಾಯದ ಉಳಿತಾಯ ಬಜೆಟ್‌ನ್ನು ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರಕ್ಕೆ ಅಗತ್ಯ ಸೌಲಭ್ಯ ಒದಗಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಪಟ್ಟಣಕ್ಕೆ ಅಗತ್ಯವಿರುವ ಸಮರ್ಪಕ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಉಪಾಧ್ಯಕ್ಷ ಇರ್ಪಾನ್ ಬೆೇಪಾರಿ, ಪುರಸಭೆ ಸದಸ್ಯರಾದ ಜಗದೀಶ ಕವಟಗಿಮಠ, ರಾಮಾ ಮಾನೆ, ಶ್ಯಾಮ ರೇವಡೆ, ಸಾಬೀರ್ ಜಮಾದಾರ, ಗುಲಾಬ್ ಬಾಗವಾನ, ಸಂಜಯ ಕವಟಗಿಮಠ, ಪ್ರವೀಣ ಕಾಂಬಳೆ, ನಾಗರಾಜ ಮೇದಾರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net