

ಬೆಳಗಾವಿ: ಮೂರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಚಿಕ್ಕೋಡಿ, ಗೋಕಾಕ ಪ್ರತ್ಯೇಕ ಜಿಲ್ಲೆಗಳನ್ನು ಡಿ.31ರೊಳಗೆ ರಚನೆ ಮಾಡಿ ಸರ್ಕಾರ ೂಷಿಸಬೇಕು. ಬೈಲಹೊಂಗಲ ಪ್ರತ್ಯೇಕ ಜಿಲ್ಲೆಯಾದರೂ ನನ್ನ ಅಭ್ಯಂತರವಿಲ್ಲ ಎಂದು ಈರಣ್ಣ ಕಡಾಡಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 2025ರ ಡಿಸೆಂಬರ್ 31ರೊಳಗೆ ಬೆಳಗಾವಿ ಜಿಲ್ಲೆ ವಿಭಜಿಸಬೇಕು ಎಂದು ಒತ್ತಾಯಿಸಿದರು.
ಗಡಿ ವಿವಾದ ಈಗ ಮುಗಿದ ಅಧ್ಯಾಯ. ಜಿಲ್ಲಾ ವಿಭಜನೆಯಿಂದ ತೊಂದರೆಯಾಗದು. ಗಡಿ ವಿವಾದವೇ ಬೇರೆ, ಆಡಳಿತಾತ್ಮಕ ವಿಷಯವೇ ಬೇರೆ. 2026ರ ಏಪ್ರಿಲ್ 1ರಿಂದ ಜನಗಣತಿ ಅಧಿಕೃತವಾಗಿ ಆರಂಭಗೊಳ್ಳಲಿದೆ. ಹೀಗಾಗಿ ಆಡಳಿತಾತ್ಮಕ ಪ್ರದೇಶಗಳ ಗಡಿಗಳಲ್ಲಿ ಬದಲಾವಣೆ ಪ್ರಸ್ತಾವಗಳಿದ್ದರೆ 2025ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದರು.
ಜನಗಣತಿ ವಿಷಯವಾಗಿ ಈಚೆಗೆ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. 2026ರ ಏಪ್ರಿಲ್ 1ರಿಂದ ಜನಗಣತಿ ಅಧಿಕೃತವಾಗಿ ಆರಂಭಗೊಳ್ಳಲಿದೆ. ಪ್ರಥಮ ಹಂತದಲ್ಲಿ ಜನವಸತಿ ಪ್ರದೇಶಗಳು ಮತ್ತು ಮನೆಗಳ ಸರ್ವೇ ನಡೆಯಲಿದ್ದು, 2027ರ ಫೆಬ್ರುವರಿ 1ರಿಂದ ಜನರ ಗಣತಿ ನಡೆಯಲಿದ್ದು, ಪ್ರಕ್ರಿಯೆ ಮುಗಿಯಲು 2 ವರ್ಷದ ಬೇಕಾಗುತ್ತದೆ. ಗಣತಿ ಆರಂಭವಾದರೆ ಜಿಲ್ಲಾ ವಿಭಜನೆ ಪ್ರಕ್ರಿಯೆ ಮತ್ತೆ ನನೆಗುದಿಗೆ ಬೀಳುತ್ತದೆ. ಹಾಗಾಗಿ ಈ ವರ್ಷಾಂತ್ಯದೊಳಗೆ ವಿಭಜನೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರಗಳು ಬೆಳಗಾವಿ ಜಿಲ್ಲೆ ವಿಭಜಿಸುತ್ತೇವೆ ಎಂದು ಹೇಳುತ್ತ ಬಂದಿವೆ. ಹಲವು ಆಯೋಗಗಳು ಸರ್ಕಾರಕ್ಕೆ ವರದಿಯೂ ಕೊಟ್ಟಿವೆ. ಆದರೆ, ಬೇಡಿಕೆ ಮಾತ್ರ ಈಡೇರಿಲ್ಲ ಎಂದು ದೂರಿದರು. ಬೆಳಗಾವಿ ಜಿಲ್ಲೆ ವಿಭಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸುಕರಿದ್ದಾರೆ. ಹಾಗಾಗಿ ಬೆಳಗಾವಿ ವಿಭಜಿಸಿ, ಪ್ರತ್ಯೇಕ ಜಿಲ್ಲೆ ರಚನೆಗೆ ಸರ್ಕಾರ ನಾಂದಿ ಹಾಡಬೇಕು ಎಂದು ಒತ್ತಾಯಿಸಿದರು. ಹನುಮಂತ ಕೊಂಗಾಲಿ, ಬಸವರಾಜ ಗಾಡವಿ ಸುದ್ದಿಗೋಷ್ಠಿಯಲ್ಲಿದ್ದರು.