

ಲಕ್ಕೂರು: ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 78,63,162 ರೂ. ನಗದು, 97 ಗ್ರಾಂ ಚಿನ್ನ, 1 ಕೆ.ಜಿ ಬೆಳ್ಳಿ, 36 ವಿದೇಶಿ ನೋಟು ಸಂಗ್ರಹವಾಗಿದೆ.
ದೇವಾಲಯ ಆವರಣದಲ್ಲಿದ್ದ 3 ಹುಂಡಿ ಹಾಗೂ ಅನ್ನದಾಸೋಹದ 1 ಹುಂಡಿಯನ್ನು ಜಿಲ್ಲಾ ಉಪವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಮುಜರಾಯಿ ತಹಸೀಲ್ದಾರ್ ನಾಗವೇಣಿ, ತಹಸೀಲ್ದಾರ್ ಕೆ.ರಮೇಶ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಟಿ.ಎನ್.ಮಂಜುಳಾ ನೇತೃತ್ವದಲ್ಲಿ ಎಣಿಕೆ ಮಾಡಲಾಯಿತು. ಅಮೆರಿಕದ 13, ನ್ಯೂಜಿಲ್ಯಾಂಡ್‌ನ 20, ನೇಪಾಳದ 2, ಅರಬ್ 1 ನೋಟು ಪತ್ತೆಯಾಗಿದೆ.
ಕಳೆದ ಜನವರಿ ಅಂತ್ಯದಲ್ಲಿ 63,97,964 ರೂ. ನಗದು ಸೇರಿ 64 ಗ್ರಾಂ ಚಿನ್ನ, 327 ಗ್ರಾಂ ಬೆಳ್ಳಿ, ವಿದೇಶಿ ನೋಟುಗಳು ಸಂಗ್ರಹವಾಗಿತ್ತು. ಪ್ರಸ್ತುತ ವರ್ಷ ಕರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಸುಮಾರು 2 ತಿಂಗಳ ಕಾಲ ದೇಗುಲವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಫೆಬ್ರವರಿಯಿಂದ ಜುಲೈ 28ರವರೆಗೂ ಭಕ್ತರು ದೇಗುಲಕ್ಕೆ ಅರ್ಪಿಸಿರುವ ನಗದು, ಚಿನ್ನ, ಬೆಳ್ಳಿ ಸೇರಿ ಹಲವು ವಿದೇಶಿ ನೋಟುಗಳ ಎಣಿಕೆ ಕಾರ್ಯ ನಡೆಯಿತು. ಸಂಗ್ರಹವಾದ ಹಣವನ್ನು ಚಿಕ್ಕತಿರುಪತಿ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಕಂದಾಯ ಇಲಾಖೆ ಸಿಬ್ಬಂದಿ, ಲಕ್ಕೂರು ಹೋಬಳಿಯ ಸರ್ಕಾರಿ ಶಾಲೆಗಳ ಶಿಕ್ಷಕರು, ದೇವಾಲಯ ಸಿಬ್ಬಂದಿ, ಕೆನರಾ ಬ್ಯಾಂಕ್ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಗುಟ್ಟಹಳ್ಳಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಬ್ರಮಣಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಎಂ.ವೀರಭದ್ರಪ್ಪ, ಟಿ.ಆರ್.ವೆಂಕಟೇಶ್‌ಗೌಡ, ಮಾಜಿ ಸದಸ್ಯರಾದ ಸುರೇಶ್‌ಬಾಬು, ವಿ.ಶ್ರೀನಿವಾಸ್, ಜಿಲ್ಲಾ ಮುಜರಾಯಿ ಇಲಾಖೆಯ ಹರಿ, ಲಕ್ಕೂರು ಠಾಣೆಯ ಎಎಸ್‌ಐ ನಾಗರಾಜ್ ಹಾಗೂ ಸಿಬ್ಬಂದಿ ವೆಂಕೊಬ್‌ರಾವ್ ಇದ್ದರು.