ಚಿಕ್ಕರಂಗನಾಥ ಕೆರೆ ಕೋಡಿ ಬಿದ್ದು ಮನೆಗಳು ಜಲಾವೃತ

5-kollegal-2,,,
Published on

ಕೊಳ್ಳೇಗಾಲ: ಕಳೆದ ಎರಡ್ಮೂರು ದಿನಗಳಿಂದ ಸುರಿದ ಅಧಿಕ ಮಳೆಯಿಂದಾಗಿ ಚಿಕ್ಕರಂಗನಾಥ ಕೆರೆ ಕೋಡಿ ಬಿದ್ದು, ಸರ್ಕಾಟನ್ ಕಾಲುವೆ ಮೂಲಕ ಸಾಗಿ ಕುಪ್ಪಮ್ಮ ಕಾಲುವೆ ತುಂಬಿ ಹರಿದು ನೀರು ಪಟ್ಟಣದ ವ್ಯಾಪ್ತಿಯಲ್ಲಿ ಅವಾಂತರ ಸೃಷ್ಟಿಸಿದೆ.


ಕುಪ್ಪಮ್ಮ ಕಾಲುವೆ ತುಂಬಿ ಹರಿದ ಕಾರಣ ಪಟ್ಟಣದ ಇಂದಿರಾಗಾಂಧಿ ಕಾಲನಿಯ ನಿವಾಸಿ ಕೈಮಗ್ಗ ವೃತ್ತಿ ಮಾಡುವ ಶ್ರೀನಿವಾಸ್, ಮಂಜಮ್ಮ, ಚೆಲುವಮ್ಮ ಆಡಿಟರ್ ಶ್ರೀನಿವಾಸ್ ಎಂಬುವರ ಮನೆಗಳು ಜಲಾವೃತವಾಗಿದೆ. 5ನೇ ವಾರ್ಡ್ ಉಪ್ಪಾರ ಮೋಳೆಯ 4 ಮನೆ ಗೂ ನೀರು ನುಗ್ಗಿದೆ. ಇದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಉಪ್ಪಾರ ಮೋಳೆ, ಹಳೇ ಅಣಗಳ್ಳಿ ಭಾಗದಲ್ಲಿ ಜಮೀನು ಜಲಾವೃತವಾಗಿದೆ. ಇದೀಗ ಭತ್ತ ನಾಟಿ ಮಾಡಿದ್ದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಒಟ್ಟಾರೆ ನೂರಾರು ಎಕರೆ ಜಮೀನು ಜಲಾವೃತವಾಗಿದೆ.


ನಗರಸಭೆ ಪೌರಾಯುಕ್ತ ರಮೇಶ್, ಪರಿಸರ ಇಂಜಿನಿಯರ್ ಪ್ರಸನ್ನ, ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರಸಭೆಯ ಸ್ವಚ್ಛತಾ ವಾಹನಗಳನ್ನು ಬಳಸಿಕೊಂಡು ಹೆಚ್ಚು ನೀರು ಇಂದಿರಾ ಕಾಲನಿಗೆ ನುಗ್ಗದಂತೆ, ಕಾಲುವೆಯಲ್ಲಿ ನೀರು ಸರಾಗವಾಗಿ ನೀರು ಹರಿಯಲು ಕ್ರಮವಹಿಸಿದ್ದಾರೆ.


ಕಲುಷಿತ ನೀರಿನ ಅವಾಂತರ: ಚಿಕ್ಕರಂಗನಾಥ ಕೆರೆಯಿಂದ ಸರ್ಕಾಟನ್ ಕಾಲುವೆ ಮೂಲಕ ಹರಿದು ಬರುವ ನೀರಿನಲ್ಲಿ ತ್ಯಾಜ್ಯ ಮಿಶ್ರಿತ ಕಲುಷಿತ ನೀರು ಸೇರಿದೆ. ಕೆರೆಯ ಒಡಲಿಗೂ ಜನವಸತಿ ಕೇಂದ್ರಗಳಿಂದ ಚರಂಡಿ ನೀರು ಬಿಡಲಾಗುತ್ತಿದೆ. ಇದರಿಂದ ಕಾಲುವೆಯಿಂದ ಬಡಾವಣೆ ಮನೆಗೆ ನುಗ್ಗಿದ ನೀರು ಗಬ್ಬು ನಾರುತ್ತಿದೆ. ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಇಂದಿರಾಗಾಂಧಿ ಕಾಲನಿಯ ಮನೆಗೆ ನುಗ್ಗಿದ ನೀರನ್ನು ನಿವಾಸಿಗಳು ಬಕೆಟ್, ಚೊಂಬುಗಳನ್ನು ಮೊಗೆದು ಹಾಕುವ ದೃಶ್ಯ ಕಂಡು ಬಂದಿತು.


ನಗರಸಭೆ ಸದಸ್ಯ ಧರಣೇಶ್ ಮಾತನಾಡಿ, ಅಧಿಕ ಮಳೆಯಿಂದ ಚಿಕ್ಕರಂಗನಾಥ ಕೆರೆ ಭರ್ತಿಯಾಗಿ ಕುಪ್ಪಮ್ಮ ಕಾಲುವೆ ತುಂಬಿ ಹರಿಯುತ್ತಿದೆ. ಕಾಲುವೆಯಲ್ಲಿ ಹೂಳು ತುಂಬಿ ಹೋಗಿರುವುದರಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರಬಂದು ಕಾಲುವೆ ಅಕ್ಕ-ಪಕ್ಕದ ಜಮೀನುಗಳಿಗೆ ನುಗ್ಗಿದೆ. ಉಪ್ಪಾರ ಮೋಳೆ ಬಡಾವಣೆಯ ಕೆಲ ಮನೆಗಳು ಜಲಾವೃತವಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಬಹಳ ತೊಂದರೆಯಾಗುತ್ತದೆ. ಜಿಲ್ಲಾಡಳಿತ ಹಾಗೂ ನಗರಸಭೆ ಎಚ್ಚೆತ್ತು ಕ್ರಮವಹಿಸಬೇಕು. ಕೆರೆ, ಕಾಲುವೆ ಹೂಳಿನಿಂದ ಈ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಆಕ್ರೋಶ ಹೊರಹಾಕಿದರು.


ನಗರಸಭೆ ಪೌರಾಯುಕ್ತ ಎ.ರಮೇಶ್ ಮಾತನಾಡಿ, ಚಿಕ್ಕರಂಗನಾಥ ಕೆರೆಗೆ ತುಂಬಿ ಹೋಗಿದೆ. ಅಲ್ಲಿಂದ ಬಂದ ನೀರು ಕೊಂಗಳಕೆರೆ ಸೇರಿ, ನಂತರ ಕುಪ್ಪಮ್ಮ ಕಾಲವೆಯಲ್ಲಿ ಹರಿಯುತ್ತಿದೆ. ಕಾಲುವೆಯ ಹೆಚ್ಚುವರಿ ನೀರು ಅಕ್ಕಪಕ್ಕದ ನುಗ್ಗಿ ತೊಂದರೆ ಉಂಟುಮಾಡಿದೆ. ಇಂದಿರಾಗಾಂಧಿ ಕಾಲನಿ, ಉಪ್ಪಾರಮೋಳೆ ಬಡಾವಣೆಗೂ ನುಗ್ಗಿದೆ. ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಇದ್ದು ಹೆಚ್ಚಿನ ತೊಂದರೆ ಆಗದಂತೆ ನೋಡಿ ಕೊಳ್ಳುತ್ತಿದ್ದಾರೆ. ನೀರಾವರಿ ಅಧಿಕಾರಿಗಳು ಬೇರೆ ಕೆರೆಗಳಿಗೆ ನೀರನ್ನು ಡೈವರ್ಟ್ ಮಾಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net