

ಶೃಂಗೇರಿ: ನವರಾತ್ರಿ ಉತ್ಸವ ಪ್ರಯುಕ್ತ ಶ್ರೀ ಶಾರದಾ ಮಠದಲ್ಲಿ ಶ್ರೀ ಶಾರದೆ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಜಗನ್ಮಾತೆ ಕೈಯಲ್ಲಿ ಕಮಂಡಲು, ಅಕ್ಷಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ, ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರನ್ನು ಅನುಗ್ರಹಿಸಿದಳು.
ಭಕ್ತರು ಜಗನ್ಮಾತೆ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆದು ಭೋಜನ ಸ್ವೀಕರಿಸಿದರು. ಮಠದ ಎಲ್ಲ ದೇವಾಲಯಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಶ್ರೀ ಶಾರದೆಯ ಸನ್ನಿಧಿ ವೈವಿಧ್ಯಮಯ ಹೂಗಳಿಂದ ಅಲಂಕೃತಗೊಂಡಿದೆ. ಮುಂಜಾನೆ ಜಗನ್ಮಾತೆಯ ವಿಶೇಷ ಪೂಜೆಗಾಗಿ ವಾದ್ಯಗೋಷ್ಠಿಯೊಂದಿಗೆ ಆರ್ಚಕರು ಆನೆ ಮೇಲೆ ಗಂಗೆಯನ್ನು ಹೊತ್ತುಕೊಂಡು ಶ್ರೀ ಶಾರದಾ ಮಠಕ್ಕೆ ತೆರಳುವ ದೃಶ್ಯವನ್ನು ಭಕ್ತರು ಕುತೂಹಲದಿಂದ ವೀಕ್ಷಿಸಿದರು. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವಿದ್ವಾನ್ ಟಿ.ರಾಮಗೋಪಾಲ್ ಭಾಗವತರ್ ಹರಿದ್ವಾರಮಂಗಲಂ ಅವರಿಂದ ನಾಮಸಂಕೀರ್ತನೆ ನಡೆಯಿತು.
ಬೀದಿ ಉತ್ಸವದಲ್ಲಿ ಅಡ್ಡಗದ್ದೆ ಗ್ರಾಪಂ ಭಕ್ತಾದಿಗಳು, ಶೃಂಗೇರಿ ವಿಪ್ರ ವೇದಿಕೆ, ಅಡ್ಡಗದ್ದೆ ಶ್ರೀ ವಿನಾಯಕ ಯುವಕ ಸಂಘ, ಭೂಮಿಕಾ ರೈತ ಮಹಿಳಾ ಸಂಘ, ಹೆಗ್ಗದ್ದೆ ಶ್ರೀ ಅನಂತಪದ್ಮನಾಭ ಸೇವಾಸಮಿತಿ, ನೇತ್ರವಳ್ಳಿ ದುರ್ಗಾಪರಮೇಶ್ವರಿ ಭಕ್ತಮಂಡಳಿ, ಓಂಶಕ್ತಿ ಸ್ವಸಹಾಯ ಸಂಘ, ಕೊಪ್ಪ ಶ್ರೀನಿಕೇತನ ಭಜನಾ ಮಂಡಳಿ, ದುರ್ಗಾಮಾತಾ ಭಕ್ತವೃಂದ ಭಜನಾಮಂಡಳಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ, ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾನುವಾರವಾಗಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಗಾಂಧಿ ಮೈದಾನದ ವಾಹನ ನಿಲುಗಡೆ ಭರ್ತಿಯಾಗಿತ್ತು.
ನವರಾತ್ರಿಯ ವಿಶೇಷವಾದ ದರ್ಬಾರು ನಡೆಯಿತು. ಮಠದ ಸಂಪ್ರದಾಯಕ್ಕೆ ಅನುಗುಣವಾಗಿ ಕಿರೀಟ, ಆಭರಣಗಳನ್ನು ಧರಿಸಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಉತ್ಸವದಲ್ಲಿ ದರ್ಬಾರಿಗೆ ಆಗಮಿಸಿದರು. ನಂತರ ವ್ಯಾಖ್ಯಾನ ಸಿಂಹಾಸನದಲ್ಲಿರುವ ಶ್ರೀ ಶಾರದಾಂಬೆಯ ಉತ್ಸವಮೂರ್ತಿಯನ್ನು ಬಂಗಾರದ ರಥದಲ್ಲಿ ಇರಿಸಿದರು. ವೇದ-ವಾದ್ಯ ಘೋಷಗಳೊಂದಿಗೆ ಛತ್ರಿ-ಚಾಮರಗಳೊಂದಿಗೆ ಶ್ರೀ ಶಾರದಾ ದೇವಾಲಯದ ಒಳಪ್ರಾಕಾರದಲ್ಲಿ ಮೂರು ಸುತ್ತು ರಥೋತ್ಸವ ನಡೆಯಿತು. ರಥದ ಮುಂದೆ ಯತಿವರ್ಯರು ಅಭಿಮುಖವಾಗಿ ನಡೆದರು. ಬಳಿಕ ಸ್ವರ್ಣಸಿಂಹಾಸನದಲ್ಲಿ ಶ್ರೀಗಳು ಆಸೀನರಾದರು. ದಿನಕ್ಕೆ ಒಂದು ಅಥವಾ ಎರಡು ಅಧ್ಯಾಯಗಳ ಸಪ್ತಸತಿ ಪಾರಾಯಣ ನಡೆಯುತ್ತದೆ. ಅಮ್ಮನವರಿಗೆ ಮಹಾಮಂಗಳಾರತಿ, ವೇದಗಳ ಪಾರಾಯಣ, ಪಂಚಾಂಗಶ್ರವಣ, ಸಂಗೀತ, ಸರ್ವವಾದ್ಯಸೇವೆಗಳು ನೆರವೇರಿದವು. ದರ್ಬಾರು ವೀಕ್ಷಿಸಲು ಸಹಸ್ರಾರು ಭಕ್ತರು ಸಂಜೆಯಿಂದಲೇ ಉತ್ಸಾಹದಿಂದ ಕಾಯುತ್ತಿದ್ದರು.
ಅ.12ರಂದು ಜಗನ್ಮಾತೆ ಬ್ರಾಹ್ಮಿಯಾಗಿ ಭಕ್ತರನ್ನು ಅನುಗ್ರಹಿಸಳಿದ್ದಾಳೆ. ಮಠದಲ್ಲಿ ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ,ದೇವಿಭಾಗವತ, ಶ್ರೀಮದ್ಭಾಗವತ, ಮಾಧವೀಯ ಶಂಕರ ದಿಗ್ವಿಜಯ, ಸುವಾಸಿನಿ ಪೂಜೆ, ಕುಮಾರೀ ಪೂಜೆ ಜರುಗಲಿದೆ.
ಬೀದಿ ಉತ್ಸವಕ್ಕೆ ಎರಡು ದಶಕಗಳಿಗಿಂತ ಹೆಚ್ಚು ಇತಿಹಾಸವಿದೆ. ಶ್ರೀ ಶಾರದೆಯ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ ಮುಖ್ಯಬೀದಿಯಲ್ಲಿ ಸಾಗಿ ಬರುತ್ತದೆ. ಮಠದ ಆನೆಗಳು, ಅಶ್ವಗಳು, ವೇದ, ವಾದ್ಯಗೋಷ್ಠಿಗಳ, ರಸ್ತೆಯ ಇಕ್ಕೆಲಗಳಲ್ಲಿ ತಳಿರುತೋರಣಗಳು, ವಿದ್ಯುತ್ ದೀಪ ಅಲಂಕಾರಗಳ ಜತೆ ಭಕ್ತರು ಹಾಡುವ ಭಜನೆಗಳು, ಕುಣಿತಗಳು ಆಧ್ಯಾತ್ಮಿಕ ಒಲವು ತೋರಿಸುತ್ತವೆ.