ಸಾಂಗ್ಲಿಯ ಬೀರದೇವ್‌ಗೆ ಬೆಳ್ಳಿಗದೆ Wrestling

Dasara
ತರೀಕೆರೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ಸಾಂಗ್ಲಿ ಪೈಲ್ವಾನ್ ಬೀರದೇವ್‌ಗೆ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಬೆಳ್ಳಿಗದೆ ವಿತರಿಸಿದರು. ಡಾ. ಟಿ.ಡಿ.ರವಿಕುಮಾರ್, ಟಿ.ಎಸ್.ಶ್ರೀಧರ್, ಲೋಕೇಶ್, ಟಿ.ಎಂ.ಗಂಗಾಧರ್ ಇತರರಿದ್ದರು.
ತರೀಕೆರೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ಸಾಂಗ್ಲಿ ಪೈಲ್ವಾನ್ ಬೀರದೇವ್‌ಗೆ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಬೆಳ್ಳಿಗದೆ ವಿತರಿಸಿದರು. ಡಾ. ಟಿ.ಡಿ.ರವಿಕುಮಾರ್, ಟಿ.ಎಸ್.ಶ್ರೀಧರ್, ಲೋಕೇಶ್, ಟಿ.ಎಂ.ಗಂಗಾಧರ್ ಇತರರಿದ್ದರು.
Published on: 

ತರೀಕೆರೆ: ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಪುರಸಭೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಪಂದ್ಯಾವಳಿ ಶನಿವಾರ ತಡರಾತ್ರಿ 2 ಗಂಟೆ ಹೊತ್ತಿಗೆ ತೆರೆ ಕಂಡಿತು.

ಗ್ಯಾಲರಿಯಲ್ಲಿ ಕಿಕ್ಕಿರಿದು ಜಮಾಯಿಸಿದ್ದ ಪ್ರೇಕ್ಷಕರ ಕುತೂಹಲಕ್ಕೆ ಸಾಕ್ಷಿಯಾಗಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಕೆಮ್ಮಣ್ಣಿನಿಂದ ಸಿದ್ಧಪಡಿಸಿದ್ದ ಅಖಾಡದಲ್ಲಿ ಸಾಂಗ್ಲಿಯ ಪೈಲ್ವಾನ್ ಬೀರದೇವ್ ಪುರಸಭೆ ಪ್ರಾಯೋಜಿಸಿದ 1.250 (ಒಂದು ಕಾಲು) ಕೆ.ಜಿ. ತೂಕದ ಬೆಳ್ಳಿಗದೆ ಜಯಿಸಿದರು.

ಬೆಳ್ಳಿ ಗದೆಗಾಗಿ ನಡೆದ ಅಂತಿಮ ಕಾದಾಟದಲ್ಲಿ ಮಹಾರಾಷ್ಟ್ರದ ಕುಸ್ತಿಪಟು ಗಣೇಶ್ ಗಾಯಕ್ವಾಡ್ ಹಾಗೂ ಸಾಂಗ್ಲಿಯ ಜಟ್ಟಿ ಬೀರದೇವ್ ನಡುವೆ ತೀವ್ರ ಸೆಣಸಾಟ ಏರ್ಪಟ್ಟಿತ್ತು. ಸಾಂಗ್ಲಿಯ ಪೈಲ್ವಾನ್ ಬೀರದೇವ್ ಗೆಲುವು ಸಾಧಿಸಿದರು.

ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆಯ ಅಂತಿಮ ದಿನವಾದ ಶನಿವಾರ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ, ಮಹಾರಾಷ್ಟ್ರ, ಬೆಳಗಾವಿ, ಧಾರವಾಡ, ಕಲುಬುರಗಿ, ರಾಯಚೂರು, ಬೀದರ್, ಶಿವಮೊಗ್ಗ, ಮೈಸೂರು, ರಾಣೆಬೆನ್ನೂರು, ದಾವಣಗೆರೆ, ಭದ್ರಾವತಿ, ತರೀಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದಲೂ ಕುಸ್ತಿ ಪಟುಗಳು ಆಗಮಿಸಿದ್ದರು.

ಟಿ.ಎಚ್.ತಿಮ್ಮಯ್ಯ ಹಾಗೂ ವೀಳ್ಯದೆಲೆ ಸಂಘ ಪ್ರಾಯೋಜಿಸಿದ 2 ಮಿನಿ ಬೆಳ್ಳಿಗದೆ, ಈ ಹಿಂದೆ ಪಟ್ಟಣವನ್ನು ಆಳಿದ ಪಾಳೇಗಾರ ಸರ್ಜಾ ಹನುಮಪ್ಪ ನಾಯಕ ವಂಶಸ್ಥರು ಸಾಂಪ್ರದಾಯಿಕವಾಗಿ ಕೊಡುವ ಚಿನ್ನದ ಅಖಾಡ ಬಳೆ, ಹೂವು, ಹಣ್ಣು ಮತ್ತು ತರಕಾರಿ ಚಿಲ್ಲರೆ ಮಾರಾಟಗಾರರ ಸಂಘ ನೀಡುವ ತಲಾ ಒಂದು ಬೆಳ್ಳಿ ಕಿರೀಟ, ವಿವಿಧ ಸಮಾಜಗಳು ಕೊಡಮಾಡುವ ಬೆಳ್ಳಿ ಹಾರ, ಬೆಳ್ಳಿ ಪದಕಗಳು, 65ಕ್ಕೂ ಹೆಚ್ಚು ಬಂಗಾರದ ಪದಕಗಳಿಗಾಗಿ ಸೆಣಸಾಡಿದರು. ಜಟ್ಟಿಗಳು ಸ್ಪರ್ಧಾ ಮನೋಭಾವದಿಂದ ಕಾದಾಡಿ ಬಹುಮಾನ ಗಳಿಸುವ ಮೂಲಕ ಕ್ರೀಡಾಭಿಮಾನಿಗಳ ಮನಸೂರೆಗೊಂಡರು.

ಮಾಜಿ ಪೈಲ್ವಾನರಾದ ಗಂಗಾಧರ್, ಶ್ರೀನಿವಾಸ್, ಕಾರೆ ಶಿವಣ್ಣ ಹಾಗೂ ಸೋಮಣ್ಣ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಬಹುಮಾನ ವಿತರಣೆ ಸಮಾರಂಭದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್, ಉಪಾಧ್ಯಕ್ಷ ಡಾ. ಟಿ.ಡಿ.ರವಿಕುಮಾರ್, ಪ್ರಮುಖರಾದ ಲೋಕೇಶ್, ಟಿ.ಎಸ್.ಶ್ರೀಧರ್, ಟಿ.ಎಂ.ಗಂಗಾಧರ್, ವೆಂಕಟೇಶ್, ಮಧು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net