

ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದ ಶರನ್ನವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಶ್ರೀ ಶಾರದೆಗೆ ಮಹಾಭಿಷೇಕ ನೆರವೇರಿಸಲಾಯಿತು. ಜಗನ್ಮಾತೆಗೆ ವಿವಿಧ ಫಲ ಪಂಚಾಮೃತ ಅಭಿಷೇಕದ ಬಳಿಕ ಮೂಲಬಿಂಬದ ಹರಿದ್ರಾದರ್ಶನ, ನೀರಾಜನ, ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀಸೂಕ್ತ ಪಠಣದಿಂದ ಅಭಿಷೇಕ ನೆರವೇರಿಸಲಾಯಿತು. ಜಗದ್ಗುರುಗಳ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿತು.
ಶ್ರೀ ಶಾರದೆ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ನಿರ್ವಿಘ್ನವಾಗಿ ನಡೆಯಲು ಶ್ರೀ ಶಕ್ತಿಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಅಷ್ಟಾವಧಾನ ಸೇವೆ, ಬಳಿಕ ಜಗನ್ಮಾತೆಗೆ ಪೂಜೆ ಇತ್ಯಾದಿ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಮಂದಸ್ಮಿತೆಯಾದ ತಾಯಿ ಶಾರದೆ ತೊಡೆಯ ಮೇಲೆ ಮುದ್ದಾದ ಮಗುವನ್ನು ಮಲಗಿಸಿಕೊಂಡು ಈ ಜಗತ್ತಿನ ಸೃಷ್ಟಿಗೆ ನಾನೇ ತಾಯಿ. ನೀನು ಮಗುವಿನಂತೆ ನನ್ನನ್ನು ಭಜಿಸುವಿಯಾದರೆ ನಾನು ನಿನ್ನನ್ನು ಮಗುವಿನಂತೆ ರಕ್ಷಿಸುತ್ತೇನೆ ಎಂದು ಭಕ್ತನನ್ನು ಕುರಿತು ಹೇಳುತ್ತಿದ್ದಾಳೋ ಎಂಬಂತಿರುವ ಅಲಂಕಾರ ಕಣ್ಮನ ಸೆಳೆಯುತ್ತದೆ. ನವರಾತ್ರಿಯಲ್ಲಿ ಜಗನ್ಮಾತೆಗೆ ವಿವಿಧ ಅಲಂಕಾರಗಳನ್ನು ಮಾಡುತ್ತಾರೆ. ಶ್ರೀ ಶಾರದಾಂಬ ದೇಗುಲ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ.
ಮಠದ ನರಸಿಂಹವನದ ಅಧಿಷ್ಠಾನ ಮಂದಿರದಲ್ಲಿ ಶನಿವಾರ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ ಆರಾಧನಾ ಮಹೋತ್ಸವದಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು ಧಾರ್ಮಿಕ ವಿಧಿವಿಧಾನಗಳ ಬಳಿಕ ವಿಶೇಷ ಪೂಜೆ ನೆರವೇರಿಸಿದರು.
ಕ್ಷೇತ್ರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು, ತಾಲೂಕಿನ ವಸತಿಗೃಹಗಳು ಭರ್ತಿಯಾಗಿವೆ. ಮುಖ್ಯಬೀದಿಯ ಇಕ್ಕೆಲಗಳ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರವೂ ಹೆಚ್ಚಾಗುತ್ತಿದೆ.
ಮಠದಲ್ಲಿ ಅ.11ರಂದು ಶ್ರೀ ಶಾರದಾ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಜಗನ್ಮಾತೆ ಹಂಸವಾಹನಾಲಂಕಾರದಲ್ಲಿ ವಿರಾಜಮಾನಳಾಗಿ ಭಕ್ತರನ್ನು ಅನುಗ್ರಹಿಸಲಿದ್ದಾಳೆ. ಸಂಜೆ 6 ಗಂಟೆಗೆ ಬೀದಿ ಉತ್ಸವಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಹಾಗೂ ಸಂಘಸಂಸ್ಥೆಗಳ ಸದಸ್ಯರು ಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಟಿ.ರಾಮಗೋಪಾಲ್ ಭಾಗವತರ್ ಹರಿದ್ವಾರಮಂಗಲಂ ಅವರಿಂದ ನಾಮಸಂಕೀರ್ತನೆ ನಡೆಯಲಿದೆ.