

ಮೂಡಿಗೆರೆ: ತಾಲೂಕಿನಲ್ಲಿ ಕಾಂಗ್ರೆಸ್‌ನ ಎರಡು ಬಣಗಳಿಂದ ಮಾಹಿತಿ ಸಂಗ್ರಹಿಸಲು ಕೆಪಿಸಿಸಿ ವೀಕ್ಷಕ ಎ.ಎಂ.ಗಫೂರ್ ಮುಂದಿನವಾರ ಭೇಟಿ ನೀಡುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡರ ಬಣದ ಸಭೆ ಸೋಮವಾರ ನಡೆಸಿ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಲಾಯಿತು.
ಸಮಿತಿಗೆ ಹಿರಿಯ ಕಾಂಗ್ರೆಸ್ ಮುಖಂಡರ ಬಣದಿಂದ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಎಂ.ಪಿ.ಮನು, ಸುಂದರೇಶ್ ಕನ್ನಾಪುರ, ಕೆ.ಕೆ.ರಾಮಯ್ಯ, ವಸಂತಮ್ಮ, ಇರ್ಫಾನ್ ಬಣಕಲ್ ಅವರನ್ನು ನೇಮಕ ಮಾಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಿ.ಆರ್.ವಿನಯ್‌ಕುಮಾರ್ ಅವರ ಹೆಸರನ್ನು ಕೆಪಿಸಿಸಿಗೆ ವೀಕ್ಷಕರ ಮೂಲಕ ಕಳಿಸಲು ಆಯ್ಕೆ ಮಾಡಲಾಯಿತಾದರೂ ಅವರಿಗೆ 60 ವರ್ಷ ದಾಟಿದ್ದರಿಂದ ಅವರ ನೇಮಕ ಸಾಧ್ಯವಿಲ್ಲದಿದ್ದರೆ ಮರಗುಂದ ಪ್ರಸನ್ನ ಅವರ ಹೆಸರು ಕೆಪಿಸಿಸಿಗೆ ಕಳಿಸುವ ತೀರ್ಮಾನಕ್ಕೆ ಬರಲಾಯಿತು. ವೀಕ್ಷಕ ಎ.ಎಂ.ಗಫೂರ್ ಭೇಟಿ ನೀಡಿದಾಗ ಶಾಸಕರ ವಿರುದ್ಧ ಇನ್ನಷ್ಟು ದೂರು ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಗಫೂರ್ ಅ.7ರಂದು ಭೇಟಿ ನೀಡುವ ದಿನಾಂಕ ನಿಗದಿಯಾಗಿತ್ತು. ಇದರಿಂದ ತರಾತುರಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದರು. ಗಫೂಫ್ ಅವರ ಭೇಟಿ ದಿನಾಂಕ ಮುಂದೂಡಿರುವ ಬಗ್ಗೆ ಮಂಗಳವಾರ ಕೆಪಿಸಿಸಿಯಿಂದ ಹಿರಿಯ ಮುಖಂಡರ ಬಣದವರಿಗೆ ಮಾಹಿತಿ ದೊರೆತ ಬಳಿಕ ವೀಕ್ಷಕರಿಗೆ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಅಹವಾಲು ಸಲ್ಲಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಚ್.ಜಿ.ಸುರೇಂದ್ರ ಅವರಿಗೆ ನೋಟಿಸ್ ನೀಡಿ ಕುನ್ನಳ್ಳಿ ರವಿ ಎಂಬುವರನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಹಂಗಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಮ್ ಅವರನ್ನು ವಜಾಗೊಳಿಸಿ ಶಾಸಕಿ ನಯನಾ ಮೋಟಮ್ಮ ಅವರ ಕಟ್ಟಾ ಬೆಂಬಲಿಗ ಸಿ.ಬಿ.ಶಂಕರ್ ಅವರನ್ನು ನೇಮಿಸಲಾಗಿದೆ. ಇದರಿಂದ ಕೆರಳಿರುವ ಹಿರಿಯರ ಬಣದಿಂದ, ಕಳೆದ ಬಾರಿ ವೀಕ್ಷಕರಾಗಿ ಭೇಟಿ ನೀಡಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಾವಗಲ್ ಮಂಜುನಾಥ್ ಅವರಿಗೆ ಶಾಸಕರ ವಿರುದ್ಧ ಅಹವಾಲು ಸಲ್ಲಿಸಿದ್ದರು. 15 ದಿನದ ಹಿಂದೆ ಶಾಸಕಿ ನಯನಾ ಮೋಟಮ್ಮ ಮತ್ತು ಹಿರಿಯ ಕಾಂಗ್ರೆಸ್ ಬಣದ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಬೆಂಗಳೂರಿಗೆ ಕರೆಸಿ ಸಂಧಾನ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ. ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಸಮನ್ವಯ ಸಮಿತಿ ರಚಿಸುವ ಇಂಗಿತವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವ್ಯಕ್ತಪಡಿಸಿದಾಗ ಶಾಸಕಿ ನಯನಾ ಮೋಟಮ್ಮ ತಿರಸ್ಕರಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಜಾಗೊಂಡವರನ್ನೇ ಮರಳಿ ನೇಮಿಸುವಂತೆ ಹಿರಿಯರು ಒತ್ತಾಯಿಸಿದಾಗ, ಅದನ್ನು ಕೂಡ ಶಾಸಕಿ ನಯನಾ ಮೋಟಮ್ಮ ತಿರಸ್ಕರಿಸಿದ್ದಾರೆ. ಇದರಿಂದ ರಾಜಿ ಸಂಧಾನ ಯತ್ನ ಮುರಿದು ಬಿದ್ದಿತ್ತು. ಮತ್ತೊಮ್ಮೆ ಸಂಧಾನ ನಡೆಸಲು ಮಾಹಿತಿ ಕಲೆ ಹಾಕುವಂತೆ ಗಫೂರ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಸೋಮವಾರ ನಡೆದ ಹಿರಿಯ ಮುಖಂಡರ ಬಣದ ಸಭೆಯಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಎಚ್.ಜಿ.ಸುರೇಂದ್ರ, ಎಂ.ಪಿ.ಮನು, ಬಿ.ಎಸ್.ಜಯರಾಮ್, ಜಿ.ಎಚ್.ಹಾಲಪ್ಪಗೌಡ, ಮರಗುಂದ ಪ್ರಸನ್ನ, ಅಕ್ರಮ್ ಹಾಜಿ, ಇರ್ಫಾನ್ ಬಣಕಲ್, ಕೆ.ಕೆ.ರಾಮಯ್ಯ, ಸುಂದರೇಶ್, ಕೆ.ಆರ್.ಮಹೇಶ್, ವಿನಯ್‌ಕುಮಾರ್, ಇಂತಿಯಾಜ್, ಎಂ.ಎಸ್.ಇಬ್ರಾಹಿಂ ಇತರರಿದ್ದರು.