ಮಹಿಳೆಯರಿಗೆ ಸಮಾನ ಗೌರವ, ವೇತನ ಸಿಗಬೇಕು Women should receive equal respect

ಕಡೂರಿನಲ್ಲಿ ಐಸಿಡಿಎಸ್ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮ್ಮಿಲನ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭವ್ಯಾ ನರಸಿಂಹಮೂರ್ತಿ, ಕಲ್ಲೇಶ್, ಕೃಷ್ಣಪ್ಪ, ದೇವರಾಜ್, ಜಯಮ್ಮ, ಅಮ್ಜದ್, ಪಾರ್ವತಮ್ಮ, ಅಶೋಕ್ ಇತರರಿದ್ದರು.
ಕಡೂರಿನಲ್ಲಿ ಐಸಿಡಿಎಸ್ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮ್ಮಿಲನ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭವ್ಯಾ ನರಸಿಂಹಮೂರ್ತಿ, ಕಲ್ಲೇಶ್, ಕೃಷ್ಣಪ್ಪ, ದೇವರಾಜ್, ಜಯಮ್ಮ, ಅಮ್ಜದ್, ಪಾರ್ವತಮ್ಮ, ಅಶೋಕ್ ಇತರರಿದ್ದರು.
Published on: 

ಕಡೂರು: ಸಮಾಜದಲ್ಲಿ ಮಾತೃಪ್ರಧಾನ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕಾದ ಅಗತ್ಯವಿದ್ದು, ಮಹಿಳೆಯರಿಗೆ ಸಮಾನ ಗೌರವ ಹಾಗೂ ಸಮಾನ ವೇತನ ದೊರೆಯಬೇಕಿದೆ. ಈ ಕುರಿತಾಗಿ ಶಾಸಕರು ಸದನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಧ್ವನಿ ಎತ್ತುವಂತೆ ಅಂಗನವಾಡಿ ಎಐಟಿಯುಸಿ ಫೆಡರೇಷನ್ ರಾಜ್ಯಾಧ್ಯಕ್ಷ ಬಿ.ಅಮ್ಜದ್ ಮನವಿ ಮಾಡಿದರು.

ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯ ಫೆಡರೇಷನ್ ಎಐಟಿಯುಸಿಯಿಂದ ನಡೆದ ಐಸಿಡಿಎಸ್ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಇನ್ನೂ ಶೇ.36ರಷ್ಟು ಅಪೌಷ್ಟಿಕತೆ, ಶೇ.26ರಷ್ಟು ರಕ್ತಹೀನತೆ, ಶೇ.16ರಷ್ಟು ಮಕ್ಕಳಲ್ಲಿ ದೈಹಿಕ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುತ್ತಿದೆ. ಇಂಥ ಕಠಿಣ ಸವಾಲುಗಳ ನಡುವೆಯೂ ಸಮರ್ಪಕವಾಗಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ಮತ್ತು ಪೌಷ್ಟಿಕತೆ ಕಾಳಜಿಯೊಂದಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಸಂಕಷ್ಟದ ಸಂದರ್ಭಗಳಲ್ಲಿ ಮನೆಮನೆಗೆ ತೆರಳಿ ಜನರ ಆರೋಗ್ಯ ಮತ್ತು ಮಕ್ಕಳ ಪೋಷಣೆಗೆ ಆದ್ಯತೆ ನೀಡುವ ಮೂಲಕ ಸಮಾಜದ ಹಿತಕ್ಕಾಗಿ ಶ್ರಮಿಸಿದ್ದಾರೆ ಎಂದರು.

ಭಾರತೀಯ ಸೇನಾಧಿಕಾರಿ ಭವ್ಯಾ ನರಸಿಂಹಮೂರ್ತಿ ಮಾತನಾಡಿ, ದೇಶದ ಇತಿಹಾಸದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅತ್ಯಂತ ದೀರ್ಘ ಕಾಲದಿಂದ ಬಡವರು, ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕತೆ ಹಾಗೂ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಏಕೈಕ ಪ್ರಮುಖ ಯೋಜನೆ. ಅಂಗನವಾಡಿ ಕಾರ್ಯಕರ್ತೆಯರು ಸೈನಿಕರಂತೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಬಿಡಿಗಾಸೂ ನೀಡದೆ ಶೋಷಿಸುತ್ತಿದೆ. ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಅಂಗನವಾಡಿ ವ್ಯವಸ್ಥೆ ಬಲಗೊಳ್ಳಲು ಕಾರ್ಯಕರ್ತೆಯರ ಹಿತಾಸಕ್ತಿ ಕಾಪಾಡುವುದು ಅಗತ್ಯ. ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಮೂಲಕ ಸೇವಾ ಮನೋಭಾವದಿಂದ ಕೆಲಸ ಮಾಡಲು ಅನುಕೂಲಕರ ವಾತಾವರಣ ನಿರ್ಮಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ನೀಡುವ ಆಹಾರ ಪೂರೈಕೆಯು ಜಿಲ್ಲಾ ಮಟ್ಟದ ಹಂತದಲ್ಲಿ ಪೂರೈಕೆಗೊಳ್ಳಬೇಕಿದೆ. ಎನ್‌ಇಪಿ ಪದ್ಧತಿಯಿಂದಾಗಿ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಸುತ್ತಿದೆ. ಆದರೂ ಕಾರ್ಯಕರ್ತೆಯರು ಸವಾಲುಗಳ ನಡುವೆಯೂ ಜವಾಬ್ದಾರಿಗಳನ್ನು ಸಮರ್ಪಣಾ ಮನೋಭಾವದಿಂದ ನಿರ್ವಹಿಸುತ್ತಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕ ಗೌರವ ದೊರೆಯಬೇಕು. ವೇತನ ಹೆಚ್ಚಳ ಸೇರಿದಂತೆ ಕಾಯಂ ನೇಮಕಾತಿಗೊಳಿಸಬೇಕು ಎಂದು ಅಂಗನವಾಡಿ ಎಐಟಿಯುಸಿ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಒತ್ತಾಯಿಸಿದರು.

ಸುಕಾನ್ಯಾ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪಾಸ್‌ಬುಕ್ ವಿತರಿಸಲಾಯಿತು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ಕೆಡಿಪಿ ಸದಸ್ಯ ಅಶೋಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಬಿ.ಎಚ್.ಕೃಷ್ಣಪ್ಪ, ಸಿಡಿಪಿಒ ದೇವರಾಜ್, ಅಂಗನವಾಡಿ ಫೆಡರೇಷನ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಧಾ ಸುಂದರೇಶ್, ಜಿಲ್ಲಾಧ್ಯಕ್ಷೆ ಗ್ರೆಟ್ಟಾ ಫರ್ನಾಂಡಿಸ್, ಪ್ರಧಾನಕಾರ್ಯದರ್ಶಿ ಪುಷ್ಪಾ ಬಸವರಾಜ್, ತಾಲ್ಲೂಕು ಅಧ್ಯಕ್ಷೆ ಯು.ಆರ್.ಪಾರ್ವತಮ್ಮ, ಪಿ.ಎಸ್. ಭಾಗ್ಯಾ, ಗೌರಮ್ಮ, ಎನ್.ಎಸ್.ಶಿವಮ್ಮ, ಶಾಹೀನಾ, ಬಿ.ಮೀನಾಕ್ಷಿ, ಕಾಂತಾಮಣಿ, ಗಿರಿಜಮ್ಮ, ಪ್ರೇಮಾ ಇತರರಿದ್ದರು.