

ಬಾಳೆಹೊನ್ನೂರು: ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿಗೆ ಮಾರಕವಾಗಲಿದ್ದು, ಗ್ರಾಮಸ್ಥರು ಒಕ್ಕೊರಲಿನಿಂದ ವರದಿ ವಿರೋಧಿಸಬೇಕು ಎಂದು ನಾಗರಿಕ ವೇದಿಕೆಯ ಸಂಚಾಲಕ ಹಿರಿಯಣ್ಣ ಹೇಳಿದರು.
ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಬಿ.ಕಣಬೂರು ಗ್ರಾಮ ಪಂಚಾಯಿತಿ ಶುಕ್ರವಾರ ಆಯೋಜಿಸಿದ್ದ ಕಸ್ತೂರಿ ರಂಗನ್ ವರದಿ ಕುರಿತ ಗ್ರಾಮಸ್ಥರ ಅಹವಾಲು ಸಲ್ಲಿಕೆ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಮಲೆನಾಡಿನ ವಾಸಿಗಳ ನಿತ್ಯ ಜೀವನಕ್ಕೆ ವಿರೋಧಿಯಾಗಿದ್ದು, ಈ ವರದಿಯಲ್ಲಿ ಹಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮಲೆನಾಡಿಗೆ ಈಗಾಗಲೇ ಹಲವಾರು ಅರಣ್ಯ ಕಾಯ್ದೆಗಳನ್ನು ಹೇರಿದ್ದು, ಇದರೊಂದಿಗೆ ಕಸ್ತೂರಿ ರಂಗನ್ ವರದಿಯೂ ಜಾರಿಯಾದಲ್ಲಿ ಇಲ್ಲಿನ ಅಭಿವೃದ್ಧಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಲಿದೆ. ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವಂತೆ ನಿರ್ಣಯ ಕೈಗೊಂಡಿರುವುದು ಪೂರಕವಾಗಿದೆ ಎಂದರು.
ಬಿಜೆಪಿ ಮುಖಂಡ ಕೆ.ಟಿ.ವೆಂಕಟೇಶ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಬಗ್ಗೆ ಜನರಲ್ಲಿ ಈಗಾಗಲೇ ಆತಂಕವಿದ್ದು, ಈ ಬಗ್ಗೆ ಹಲವು ಹೋರಾಟಗಳು ನಡೆದಿವೆ. ಈ ವರದಿಗೆ ಬಾಧ್ಯಸ್ಥರಾಗುವ ಎಲ್ಲ ಗ್ರಾಮಗಳ ಜನರು ಒಕ್ಕೊರಲಿನಿಂದ ವರದಿ ವಿರೋಧಿಸಬೇಕಿದೆ ಎಂದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಎಂ.ಜೆ.ಮಹೇಶ್ ಆಚಾರ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಇಲ್ಲಿನ ಜನರ ಜೀವನಕ್ಕೆ ತೊಂದರೆಯಾಗುವ ಜತೆಗೆ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗಲಿದೆ. ಮಲೆನಾಡು ಭಾಗದ ನೂರಾರು ಪುರಾತನ ದೇವಾಲಯಗಳು, ಆಸ್ತಿಪಾಸ್ತಿಗಳು ಈ ವರದಿಯಲ್ಲಿ ಸೇರ್ಪಡೆಗೊಂಡಿದ್ದು, ಇಂತಹ ಜನ ವಿರೋಧಿ ವರದಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.
ಬಿ.ಕಣಬೂರು ಗ್ರಾಪಂ ಆಡಳಿತಾಧಿಕಾರಿ ಎಸ್.ವಿ.ಪ್ರೀತಮ್ ಕುಮಾರ್, ಪಿಡಿಒ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ, ಗ್ರಾಮ ಆಡಳಿತಾಧಿಕಾರಿ ಸಮೀಕ್ಷಾ, ಪ್ರಮುಖರಾದ ಸದಾಶಿವ ಆಚಾರ್ಯ, ಸಿ.ವಿ.ಸುನೀಲ್, ಕೆ.ಟಿ.ಗೋವಿಂದೇಗೌಡ, ಕೋಕಿಲಮ್ಮ, ಮಹಮ್ಮದ್ ಜುಹೇಬ್, ಕೆ.ಕೆ.ಗೌತಮ್ ಮತ್ತಿತರರು ಹಾಜರಿದ್ದರು.