

ಮೂಡಿಗೆರೆ: ಮಕ್ಕಳ ಆರೋಗ್ಯ, ಪೌಷ್ಟಿಕತೆ, ಪ್ರಾಥಮಿಕ ಶಿಕ್ಷಣ ಹಾಗೂ ಸಮಗ್ರ ಬೆಳವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಹತ್ವದ ಜವಾಬ್ದಾರಿ ವಹಿಸುತ್ತಿದ್ದಾರೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಈ ಸಾಲಿನಲ್ಲಿ ಮೂಡಿಗೆರೆ, ಕಳಸ ಹಾಗೂ ಚಿಕ್ಕಮಗಳೂರು ತಾಲೂಕಿನಿಂದ ಆಯ್ಕೆಯಾದ 2 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ 48 ಮಂದಿ ಸಹಾಯಕಿಯರಿಗೆ ನೇಮಕಾತಿ ಆದೇಶ ಪ್ರತಿ ವಿತರಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಆರಂಭಿಕ ಶಿಕ್ಷಣ ನೀಡುವ ಜತೆಗೆ ಮಕ್ಕಳ ಆರೋಗ್ಯದ ಮೇಲ್ವಿಚಾರಣೆಯಲ್ಲಿ ತೊಡಗುತ್ತಾರೆ. ಮಕ್ಕಳ ತೂಕ, ಬೆಳವಣಿಗೆ ಹಾಗೂ ಪೌಷ್ಟಿಕ ಸ್ಥಿತಿ ಗಮನಿಸಿ ಅಗತ್ಯವಿದ್ದಲ್ಲಿ ಪಾಲಕರು ಆರೋಗ್ಯ ಇಲಾಖೆಯ ಸಿಬ್ಬಂದಿ ಸಲಹೆ ಪಡೆದು ಮಕ್ಕಳ ಬೆಳವಣಿಗೆಗೆ ಉತ್ತೇಜನ ನೀಡುತ್ತಾರೆ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ, ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಹೊಂದಿದ್ದಾರೆ. ಪೌಷ್ಟಿಕ ಆಹಾರ, ಲಸಿಕೆ, ಆರೋಗ್ಯ ತಪಾಸಣೆ, ಸ್ವಚ್ಛತೆ ಹಾಗೂ ಬಾಲಕಿಯರ ಶಿಕ್ಷಣದ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಸಿಡಿಪಿಒ ಇಂಪನಾ ಇತರರಿದ್ದರು.