ಬೈರಾಪುರಕ್ಕೆ ಶಾಶ್ವತವಾಗಿ ನೀರೊದಗಿಸಲು ಕ್ರಮ permanent water

ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ತಹಸೀಲ್ದಾರ್ ಡಾ. ನೂರುಲ್‌ಹುದಾ ಹಾಗೂ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಸುನೀಲ್‌ಕುಮಾರ್, ಸುಮಿತ್ರಾ, ವಿನೋದ್ ಇತರರಿದ್ದರು.
ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ತಹಸೀಲ್ದಾರ್ ಡಾ. ನೂರುಲ್‌ಹುದಾ ಹಾಗೂ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಸುನೀಲ್‌ಕುಮಾರ್, ಸುಮಿತ್ರಾ, ವಿನೋದ್ ಇತರರಿದ್ದರು.
Published on: 

ಎನ್.ಆರ್.ಪುರ: ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಬೈರಾಪುರ ಗ್ರಾಮಕ್ಕೆ ತಹಸೀಲ್ದಾರ್, ಎಇಇ, ಪಿಡಿಒ ಹಾಗೂ ಅಧಿಕಾರಿಗಳು ಭೇಟಿ ನೀಡಿ ಜನರ ಜತೆ ಚರ್ಚಿಸಿದರು.

ಗ್ರಾಮದ ಸಮಸ್ಯೆ ಕುರಿತು ‘ಭದ್ರಾ ಹಿನ್ನೀರಿದ್ದರೂ ಕುಡಿಯುವ ನೀರಿಗೆ ಬವಣೆ’ ಎಂಬ ಶೀರ್ಷಿಕೆಯಡಿ ಅ.1ರಂದು ವಿಜಯವಾಣಿಯಲ್ಲಿ ಪ್ರಕಟಿಸಿದ ವಿಶೇಷ ವರದಿಗೆ ಜಿಲ್ಲಾಧಿಕಾರಿ ಸ್ಪಂದಿಸಿದ್ದು, ಅವರ ಸೂಚನೆ ಮೇರೆಗೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ನಮಗೆ ಶಾಶ್ವತ ಪರಿಹಾರ ಬೇಕು. ಒಂದು ಬಾರಿ ತಾತ್ಕಾಲಿಕ ಪರಿಹಾರ ಮಾಡಿದ ನಂತರ ಮುಂದಿನ ವರ್ಷ ಅದೇ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಬೇಸತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಶಾಶ್ವತ ಪರಿಹಾರಕ್ಕೆ ಯಾವ ಕ್ರಮ ಕೈಗೊಳ್ಳಬಹುದು? ಬೇಕಾದ ಅನುದಾನದ ಅಂದಾಜು ಪಟ್ಟಿ ಸಲ್ಲಿಸಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಸುನೀಲ್‌ಕುಮಾರ್ ಅವರಿಗೆ ತಹಸೀಲ್ದಾರ್ ಡಾ. ನೂರುಲ್ ಹುದಾ ಸೂಚಿಸಿದರು.

ಡಾ. ನೂರುಲ್ ಹುದಾ ಪತ್ರಿಕೆ ಜತೆ ಮಾತನಾಡಿ, ಗ್ರಾಮಸ್ಥರು ಅನೇಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಆಲ್ದಾರ, ಬೈರಾಪುರ, ಮರಾಠಿಕ್ಯಾಂಪ್ ಹಾಗೂ ಮಾರಿದಿಬ್ಬ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕಡಿಮೆ ಇದೆ. ಇಲ್ಲಿ ಭದ್ರಾ ವೈಲ್ಡ್ ಲೈಫ್ ವ್ಯಾಪ್ತಿಯೂ ಸೇರುತ್ತದೆ. ಎರಡು ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ವಿಫಲವಾಗಿವೆ. ಇನ್ನೂ ಎರಡು ಬೋರ್‌ವೆಲ್ ಮಂಜೂರಾಗಿವೆ ಎಂದರು.

ಶಾಶ್ವತವಾಗಿ ನೀರೊದಗಿಸಲು ಏನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ವರದಿ ತಯಾರಿಸಲು ತಿಳಿಸಿದ್ದೇನೆ. ಬಹು ಗ್ರಾಮ ಯೋಜನೆಯ ವ್ಯಾಪ್ತಿಯಲ್ಲಿ ಈ ಗ್ರಾಮಗಳು ಸೇರ್ಪಡೆಯಾಗಿವೆಯೇ ಎಂದು ಪರಿಶೀಲಿಸಲಾಗುವುದು. ವರದಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದು ಹೇಳಿದರು.

ಎಇಇ ಸುನೀಲ್‌ಕುಮಾರ್, ಮುತ್ತಿನಕೊಪ್ಪ ಪಿಡಿಒ ಸುಮಿತ್ರಾ, ಗ್ರಾಮ ಆಡಳಿತಾಧಿಕಾರಿ ವಿನೋದ್, ಮುತ್ತಿನಕೊಪ್ಪ ಗ್ರಾಪಂ ಮಾಜಿ ಸದಸ್ಯ ದೇವಂತ್ ಗೌಡ, ಗ್ರಾಮಸ್ಥರಾದ ಚಿತ್ರಪ್ಪ ಯರಬಾಳ್, ಬಾಗು ಎಸ್. ಲಾಂಬೋರ್, ಗಂಗಾಧರ ಸೇರಿದಂತೆ 60 ಕ್ಕೂ ಅಧಿಕ ಗ್ರಾಮರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net