ಬೀರೂರಿನ ರೋಗಿಗಳಿಗೆ ಖಾಸಗಿ ಮೆಡಿಕಲ್ ಸ್ಟೋರ್‌ಗಳೇ ಗತಿ!

ಬೀರೂರಿನ ಪತ್ರೆ ಕೆ.ಶಿವಪ್ಪಯ್ಯ ಸರ್ಕಾರಿ ಆಸ್ಪತ್ರೆ ಔಷಧ ವಿತರಣಾ ಕೇಂದ್ರದಲ್ಲಿ ಔಷಧ ಪಡೆಯಲು ರೋಗಿಗಳು ಸರತಿಯಲ್ಲಿ ನಿಂತಿರುವುದು.
ಬೀರೂರಿನ ಪತ್ರೆ ಕೆ.ಶಿವಪ್ಪಯ್ಯ ಸರ್ಕಾರಿ ಆಸ್ಪತ್ರೆ ಔಷಧ ವಿತರಣಾ ಕೇಂದ್ರದಲ್ಲಿ ಔಷಧ ಪಡೆಯಲು ರೋಗಿಗಳು ಸರತಿಯಲ್ಲಿ ನಿಂತಿರುವುದು.
Published on: 

ಬೀರೂರು: ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಧು ಮೇಹಿಗಳಿಗೆ ಅಗತ್ಯವಿರು ಮಾತ್ರೆಗಳು ದೊರೆಯದಿರುವುದು ರೋಗಿಗಳಲ್ಲಿ ಆತಂಕ ಮೂಡಿಸಿದೆ.

ಬೀರೂರಿನ ಪತ್ರೆ.ಕೆ.ಶಿವಪ್ಪಯ್ಯ ಸಾರ್ವಜನಿಕ ಆಸ್ಪತ್ರೆ ದಶಕಗಳಿಂದ ಸುತ್ತಮುತ್ತಲ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದೆ. ಪ್ರತಿದಿನ 200ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶುಗರ್, ಬಿಪಿ ಸೇರಿದಂತೆ ಇನ್ನಿತರೆ ಮಾತ್ರೆಗಳು ಲಭಿಸದಿರುವುದು ಸಮಸ್ಯೆಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಔಷಧಗಳು ಸಿಗದ ಕಾರಣ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡವಿದೆ. ತಮ್ಮಲ್ಲಿರುವ ಸೌಲಭ್ಯ ಬಳಸಿಕೊಂಡು ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ ಆಸ್ಪತ್ರೆ ಔಷಧಾಲಯದಲ್ಲಿ ಕೆಲವೊಂದು ಔಷಧಗಳು ಸಿಗದೆ ಹೊರಗಿನ ಖಾಸಗಿ ಔಷಧ ಅಂಗಡಿಗಳಲ್ಲಿ ಹಣ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಬೆಲೆ ಏರಿಕೆ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಇದು ಹೆಚ್ಚುವರಿ ಹೊರೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ವಿತರಣೆ ಯೋಜನೆ ಇದ್ದರೂ ಅಗತ್ಯ ಔಷಧಗಳ ಸಮರ್ಪಕ ಪೂರೈಕೆ ಇಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಯಾವ ಔಷಧಗಳು ಲಭ್ಯವಿಲ್ಲ ಎಂಬ ಮಾಹಿತಿ ರೋಗಿಗಳಿಗೆ ಸ್ಪಷ್ಟವಾಗಿ ದೊರೆಯುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

ಒಮ್ಮೆ ಮಧುಮೇಹ ಬಂದರೆ ವೈದ್ಯರು ತಿಂಗಳ ಕೋರ್ಸ್ ಅಥವಾ ಜೀವನ ಪರ್ಯತ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ವೈದ್ಯರು ಒಂದು ತಿಂಗಳ ಕೋರ್ಸ್‌ಗೆ ಮಾತ್ರೆ ಬರೆದರೆ ಆಸ್ಪತ್ರೆಯ ಔಷಧಾಲಯದಲ್ಲಿ ವಾರ ಅಥವಾ 2 ವಾರಗಳಿಗೆ ಮಾತ್ರೆ ನೀಡಿ ಸ್ಟಾಕ್ ಇಲ್ಲ ಬರುತ್ತದೆ ಬಂದ ಮೇಲೆ ಉಳಿದ ಮಾತ್ರೆ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಮಧುಮೇಹಿಗಳಿಗೆ ಔಷಧಗಳ ಸೇವನೆಯಲ್ಲಿ ನಿರಂತರತೆ ಮುಖ್ಯವಾಗಿದ್ದು, ಮಾತ್ರೆಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಅಗತ್ಯ ಔಷಧ ದೊರೆಯುವಂತೆ ನೋಡಿಕೊಳ್ಳಬೇಕಾದ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣ ಶುಗರ್ ಮಾತ್ರೆಗಳನ್ನು ಪೂರೈಸಿ ಬಡ ರೋಗಿಗಳ ಆರೋಗ್ಯದ ಹಿತದೃಷ್ಠಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈಗಾಗಲೇ ದಿನನಿತ್ಯದ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಬಡ ಕುಟುಂಬಗಳಿಗೆ ಔಷಧ ಖರೀದಿ ಹೆಚ್ಚುವರಿ ಹೊರೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಆಸ್ಪತ್ರೆ ಔಷಧ ಸಂಗ್ರಹದ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಔಷಧಗಳನ್ನು ಸಮರ್ಪಕವಾಗಿ ಪೂರೈಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿಯೇ ಉಚಿತ ಔಷಧಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು.

ಶಿವಕುಮಾರ್ ಬೀರೂರು ನಾಗರಿಕ

ಶುಗರ್ ಹಾಗೂ ಇನ್ನಿತರೆ ಔಷಧಗಳ ಸ್ಟಾಕ್ ಇಲ್ಲದ ಕಾರಣ ಇರುವ ಸ್ಟಾಕ್‌ನಲ್ಲಿಯೇ ರೋಗಿಗಳಿಗೆ ಔಷಧ ನೀಡಲಾಗುತ್ತಿದೆ. ಈ ಬಗ್ಗೆ ಇಂಡೆಂಟ್ ಕೂಡ ರವಾನಿಸಿದ್ದು, ಶೀಘ್ರದಲ್ಲಿ ಆಸ್ಪತ್ರೆಗೆ ಔಷಧಗಳು ಬರುತ್ತವೆ. ಇರುವ ಸೌಲಭ್ಯದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.

ಡಾ.ಅರುಣ್ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

ಗುಣಮಟ್ಟ ತಪಾಸಣೆ ಮುಗಿದ ನಂತರ, ಔಷಧಗಳನ್ನು ಜಿಲ್ಲಾ ಮಟ್ಟದ ಸರ್ಕಾರಿ ಔಷಧ ಉಗ್ರಾಣಗಳಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ಆಯಾ ಜಿಲ್ಲೆಯ ವ್ಯಾಪ್ತಿಗೆ ಬರುವ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬೇಡಿಕೆಗೆ ತಕ್ಕಂತೆ ವಿತರಿಸಲಾಗುತ್ತದೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತ್ರೆ ಹಾಗೂ ಔಷಧ ಕೊರತೆ ಬಗ್ಗೆ ಕೂಡಲೇ ಕ್ರಮವಹಿಸಲಾಗುವುದು

ಮಲ್ಲಿಕಾರ್ಜುನ್ ಜಿಲ್ಲಾ ಆರೋಗ್ಯ ಅಧಿಕಾರಿ