

ಎನ್.ಆರ್.ಪುರ: ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದ ಹೆಸರನ್ನು ಪ್ರಪಂಚಕ್ಕೇ ಪರಿಚಯಿಸಿದ ಕೀರ್ತಿ ಎಸ್.ಎಸ್.ಸ್ನೇಹ ಅವರಿಗೆ ಸಲ್ಲುತ್ತದೆ ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಹೇಳಿದರು.
ಪಟ್ಟಣದ ಡಿಸಿಎಂಸಿ ಶಾಲಾ ಆಡಿಟೋರಿಯಂನಲ್ಲಿ ತಾಲೂಕು ಒಕ್ಕಲಿಗರ ಸಂಘ, ಡಿಸಿಎಂಸಿ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಹಾಗೂ ಏಷಿಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಎಸ್.ಎಸ್.ಸ್ನೇಹ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಸ್ನೇಹ ಅವರ ಸಾಧನೆ ದೇಶಕ್ಕೆ ಹೆಮ್ಮೆ ತರುವಂತಾಗಿದೆ. ಪ್ರತಿಭೆ ಅನಾವರಣಗೊಳ್ಳಲು ಸಹಕಾರ ಮತ್ತು ಪ್ರೋತ್ಸಾಹ ಅತ್ಯಗತ್ಯ. ಇವರ ಪರಿಶ್ರಮದ ಹಿಂದೆ ಅವರ ಕುಟುಂಬದವರ ತ್ಯಾಗವೂ ಕೂಡ ಅಡಗಿದೆ. ನಿರಂತರ ಪರಿಶ್ರಮದಿಂದಾಗಿ ಸ್ನೇಹ ಸಾಧನೆ ಮಾಡಿ, ಉಳಿದವರಿಗೆ ಮಾದರಿಯಾಗಿದ್ದಾರೆ ಎಂದರು.
ದೆಹಲಿ ಜವಹರಲಾಲ್ ನೆಹರು ವಿದ್ಯಾಲಯದ ನಿವೃತ್ತ ಜಂಟಿ ಆಯುಕ್ತ ಎ.ಎನ್.ರಾಮಚಂದ್ರ ಮಾತನಾಡಿ, ಜೀವನದಲ್ಲಿ ಯಾವುದೇ ವಿಚಾರದಲ್ಲೂ ಸ್ಪಷ್ಟತೆ ಮತ್ತು ನಿಖರತೆ ಇರಬೇಕು. ಆಗ ಪ್ರಪಂಚವೇ ಸಹಾಯ ಮಾಡುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಶ್ರದ್ಧೆ, ಪ್ರಾಮಾಣಿಕತೆ ಹೊಂದಿರಬೇಕು ಎಂದರು.
ಶಾನುವಳ್ಳಿ ಎಸ್.ಎಸ್.ಸ್ನೇಹಾ ಅವರನ್ನು ವಾಟರ್ ಟ್ಯಾಂಕ್ ವೃತ್ತದಿಂದ ಡಿಸಿಎಂಸಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಬ್ಯಾಂಡ್ ಸೆಟ್‌ನೊಂದಿಗೆ ತೆರೆದ ವಾಹನದಲ್ಲಿ ಶಾಲೆಯವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಸ್ನೇಹಾ ಅವರನ್ನು ತಾಲೂಕು ಕಸಾಪಯಿಂದ ಸನ್ಮಾನಿಸಲಾಯಿತು.
ಸ್ನೇಹ ಅವರ ಸಾಧನೆಯ ಆಯ್ದ ಭಾವಚಿತ್ರ ಹಾಗೂ ಅವರ ಪರಿಶ್ರಮದ ಕೆಲವು ಮಾಹಿತಿಗಳನ್ನು ಹೊಂದಿದ ಮಲೆನಾಡಿನ ಮಿಂಚು ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಉಪಾಧ್ಯಕ್ಷ ಬಿ.ವಿ.ಉಪೇಂದ್ರ, ಕಾರ್ಯದರ್ಶಿ ಪಿ.ಕೆ.ಬಸವರಾಜ್, ಖಜಾಂಚಿ ಕಟಗಳಲೆ ಲೋಕೇಶ್, ಎಸ್.ಎಸ್.ಶಾಂತಕುಮಾರ್, ಡಿ.ಸಿ.ದಿವಾಕರ, ಬೆಮ್ಮನೆಮೋಹನ, ಶಾಮಯ್ಯ, ಬೆಮ್ಮನೆ ದಯಾನಂದ, ಶಾಶ್ವತಿ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಶಾಮಯ್ಯ, ಪ್ರಾಚಾರ್ಯೆ ಪದ್ಮಾ ರಮೇಶ್, ಮುಖ್ಯ ಶಿಕ್ಷಕಿ ಲೆವಿನಜುಲಿಯಾನಡಿಕಾಸ್ಟಾ ಹಾಗೂ ವಿದ್ಯಾರ್ಥಿಗಳಿದ್ದರು.