ಧಾರ್ಮಿಕ ಕಾರ್ಯಕ್ರಮಗಳಿಂದ ಸೌಹಾರ್ದ ವೃದ್ಧಿ Sri Shivanandpuri Swamiji

Kadur: Temples should not merely be places of worship, but rather centers that uphold religion, culture, and social justice, stated Sri Shivanandapuri Swamiji of the K.R. Nagar branch of the Kaginele Kanaka Gurupeetha.
ಕಡೂರು ತಾಲೂಕು ಕಂಸಾಗರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಾಲಯದ ಪ್ರಾರಂಭೋತ್ಸವದ ಧಾರ್ಮಿಕ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಶ್ರೀ ಶಿವಾನಂದಪುರಿ ಸ್ವಾಮೀಜಿ, ಗಾಯತ್ರಿ ಶಾಂತೇಗೌಡ, ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಕಂಸಾಗರ ರೇವಣ್ಣ, ಗೋಪಿನಾಥ್, ದೇಪುರಪ್ಪ ಮತ್ತಿತರರಿದ್ದರು.
ಕಡೂರು ತಾಲೂಕು ಕಂಸಾಗರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಾಲಯದ ಪ್ರಾರಂಭೋತ್ಸವದ ಧಾರ್ಮಿಕ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಶ್ರೀ ಶಿವಾನಂದಪುರಿ ಸ್ವಾಮೀಜಿ, ಗಾಯತ್ರಿ ಶಾಂತೇಗೌಡ, ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಕಂಸಾಗರ ರೇವಣ್ಣ, ಗೋಪಿನಾಥ್, ದೇಪುರಪ್ಪ ಮತ್ತಿತರರಿದ್ದರು.
Published on: 

ಕಡೂರು: ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಾಗದೆ ಧರ್ಮ, ಸಂಸ್ಕೃತಿ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಕೇಂದ್ರಗಳಾಗಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಕಂಸಾಗರ ಗ್ರಾಮದಲ್ಲಿ ಸೋಮವಾರ ಶ್ರೀ ಕರಿಯಮ್ಮ ದೇವಾಲಯದ ಪ್ರಾರಂಭೋತ್ಸವ ಹಾಗೂ ಜಾತ್ರಾ ಮಹೋತ್ಸವದ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ಗೋಪುರ ಹಾಗೂ ದೇವಸ್ಥಾನಗಳನ್ನು ನಿರ್ಮಿಸಿ ನಮ್ಮ ಧಾರ್ಮಿಕ ನಂಬಿಕೆ ಮತ್ತು ದೇವರ ಮೇಲಿನ ಭಕ್ತಿಯನ್ನು ಅಭಿವ್ಯಕ್ತಪಡಿಸುತ್ತೇವೆ. ಇಂತಹ ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ಶಾಂತಿ, ಸೌಹಾರ್ದ ಹಾಗೂ ಒಗ್ಗಟ್ಟನ್ನು ಬೆಳೆಸಲು ಸಹಕಾರಿ ಎಂದರು.

ಗ್ರಾಮಗಳಲ್ಲಿ ಸಣ್ಣಪುಟ್ಟ ಗಲಾಟೆ ಹಾಗೂ ವಿವಾದಗಳು ಉಂಟಾದಾಗ ನ್ಯಾಯಕ್ಕಾಗಿ ಕೋರ್ಟ್-ಕಚೇರಿಗಳಿಗೆ ಅಲೆದಾಡುವ ಬದಲು ಊರಿನ ಹಿರಿಯರನ್ನು ಹಾಗೂ ದೇವರನ್ನು ಸಾಕ್ಷಿಯಾಗಿಟ್ಟುಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಹಿರಿಯರು ಸತ್ಯಾಸತ್ಯ ಪರಿಶೀಲಿಸಿ ನ್ಯಾಯಯುತ ತೀರ್ಮಾನ ಕೈಗೊಳ್ಳುವ ಮೂಲಕ ಗ್ರಾಮದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡಬೇಕಿದೆ ಎಂದು ತಿಳಿಸಿದರು.

ನ್ಯಾಯಾಲಯಗಳಲ್ಲಿ ಕೆಲವೊಮ್ಮೆ ಸುಳ್ಳು ಸಾಕ್ಷಿಗಳ ಮೂಲಕ ಸತ್ಯವನ್ನು ಮರೆಮಾಚುವ ಪ್ರಯತ್ನಗಳು ನಡೆಯಬಹುದು. ಆದರೆ ದೇವರ ಸನ್ನಿಧಿಯಲ್ಲಿ ತಪ್ಪು ಮಾಡಿದವರು ಆತ್ಮಸಾಕ್ಷಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ದೇವಸ್ಥಾನಗಳು ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಧರ್ಮದ ಮೌಲ್ಯಗಳನ್ನು ಬೋಧಿಸುವ ಹಾಗೂ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಕೇಂದ್ರಗಳಾಗಬೇಕು ಎಂದು ಸಲಹೆ ನೀಡಿದರು.

ಧಾರ್ಮಿಕ ಸಮಾರಂಭ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಜತೆಗೆ ದೇವಸ್ಥಾನಗಳ ಜೀರ್ಣೋದ್ಧಾರ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಉಳಿವಿಗೂ ಆದ್ಯತೆ ನೀಡಲಾಗುತ್ತಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ಕಡೂರು ತಾಲೂಕಿನ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ಸುಮಾರು 21 ಕೋಟಿ ರೂ.ಗೂ ಅಧಿಕ ಅನುದಾನ ಒದಗಿಸಲಾಗಿದೆ ಎಂದರು.

ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಆಧುನಿಕ ಯುಗದಲ್ಲಿ ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್ ಬಳಕೆಯಲ್ಲೇ ಕಳೆಯುತ್ತಿರುವುದು ಆತಂಕಕಾರಿ. ಪಾಲಕರು ಮಕ್ಕಳನ್ನು ಮೊಬೈಲ್ ಪ್ರಪಂಚದಿಂದ ದೂರವಿಟ್ಟು ದೇವಸ್ಥಾನಗಳಿಗೆ ಕರೆತಂದು ಭಜನೆ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ದಾರ್ಶನಿಕರ ಜೀವನ, ಆದರ್ಶ ಹಾಗೂ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಶಾಲೆಗಳಲ್ಲಿ ದೊರೆಯುವ ಶೈಕ್ಷಣಿಕ ಜ್ಞಾನದ ಜತೆಗೆ ದೇವಸ್ಥಾನಗಳು, ಧಾರ್ಮಿಕ ಆಚರಣೆಗಳು ಹಾಗೂ ನಮ್ಮ ಸಂಪ್ರದಾಯಗಳ ಮೂಲಕ ಸಂಸ್ಕಾರಯುತ ಶಿಕ್ಷಣವನ್ನೂ ಮಕ್ಕಳಿಗೆ ನೀಡಬೇಕು. ಶಿಕ್ಷಣ ಮತ್ತು ಸಂಸ್ಕಾರ ಎರಡೂ ಒಂದಕ್ಕೊಂದು ಪೂರಕವಾಗಿದ್ದು ಇವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ ಎಂದರು.

ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ದೇವಾಲಯದ ಕಳಸಾರೋಹಣ ನೆರವೇರಿಸಿದರು. ಬಳಿಕ ಗ್ರಾಮದಲ್ಲಿರುವ ಶ್ರೀ ಕನಕದಾಸರ ಪ್ರತಿಮೆ ಮರು ಪ್ರತಿಷ್ಠಾಪನೆ ಮಾಡಲಾಯಿತು. ಟ್ರಸ್ಟ್ ಅಧ್ಯಕ್ಷ ಗೋಪಿನಾಥ್, ಗ್ರಾಮದ ಮುಖಂಡ ದೇಪುರಪ್ಪ, ಕೆ.ಎನ್.ಬೊಮ್ಮಣ್ಣ, ಕಂಸಾಗರ ರೇವಣ್ಣ, ಕೆ.ಎಸ್.ಕೃಷ್ಣಮೂರ್ತಿ, ಡಿ.ನಾಗರಾಜ್, ಕೆ.ಎಚ್.ರಘು, ಹಳೇಪೇಟೆ ತಿಪ್ಪೇಶ್, ಡಿ.ಹರೀಶ್, ಕೆ.ರವಿಕುಮಾರ್, ದಿನೇಶ್, ಗಂಗಾಧರ್, ಕೆ.ಎಂ.ಮಂಜುನಾಥ್, ಎಂ.ಪರಮೇಶ್ವರಪ್ಪ, ಹನುಮಂತಪ್ಪ, ಕೆ.ಕೆ.ಸುನೀಲ್ ಇತರರಿದ್ದರು.