

ಬಾಳೆಹೊನ್ನೂರು: ಹೋಬಳಿಯಲ್ಲಿ ಮಂಗಳವಾರ ಬಲಿಪಾಡ್ಯಮಿ ಅಂಗವಾಗಿ ರೈತರು ಜಮೀನುಗಳಲ್ಲಿ ದೂಪದ ಕೋಲುಗಳನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಈ ಬಾರಿ ಎರಡು ದಿನ ಪಾಡ್ಯ ಬಂದಿರುವುದರಿಂದ ಕೆಲವೆಡೆ ಸೋಮವಾರ ಬಲಿಪಾಡ್ಯಮಿ, ಗೋಪೂಜೆ ಆಚರಿಸಿದ್ದರು. ಕೆಲವು ಕಡೆಗಳಲ್ಲಿ ಮಂಗಳವಾರವೇ ಈ ಎರಡೂ ಪೂಜೆ ನೆರವೇರಿಸಿದರು. ಕತ್ತಲಾಗುತ್ತಿದ್ದಂತೆ ಜಮೀನು, ದೇವಾಲಯ, ದೈವಗಳ ಗುಡಿ ಹಾಗೂ ಮನೆಗಳ ಸಮೀಪದಲ್ಲಿ ದೂಪದ ಕೋಲನ್ನು ಹಚ್ಚಿ ಬೆಳಗಿಸಿ ದೇವರನ್ನು ಪ್ರಾರ್ಥಿಸಿದರು.
ದೂಪದ ಕೋಲುಗಳನ್ನು ಹಚ್ಚುವ ಸಂದರ್ಭದಲ್ಲಿ ಹಾಲು ಹಳ್ಳವಾಗಿ, ಬೆಣ್ಣೆ ಬೆಟ್ಟವಾಗಿ, ಮಜ್ಜಿಗೆ ಹರ್ದೂರವಾಗಿ, ಹಟ್ಟಿ ತುಂಬ ದನವಾಗಿ, ಕೊಟ್ಟಿಗೆ ತುಂಬ ಕರುವಾಗಿ, ಆಳುದ್ದ ಪೈರು ಬೆಳೆದು, ತೋಳುದ್ದ ತೆನೆ ಬಿಟ್ಟು, ನೂರಕ್ಕೆ ನೂರು ಹುಲ್ಸ್ ಕೊಟ್ಕೊಂಡು ಬಾರೋ ಬಲೀಂದ್ರಾಯ ಎಂದು ಪದವನ್ನು ಹೇಳುತ್ತ ಬಲಿಚಕ್ರವರ್ತಿಯನ್ನು ಸಂಭ್ರಮದಿಂದ ಆಹ್ವಾನಿಸಿದರು.
ಹಲವು ಕಡೆಗಳಲ್ಲಿ ಮನೆ, ದೇವಾಲಯಗಳಲ್ಲಿ ಪಾಡ್ಯದ ದಿನ ದೀಪಗಳನ್ನು ಕೆರಕನ ಉಂಡೆ ಮೇಲೆ ಹಚ್ಚಿದರು. ದೀಪಾವಳಿಯ ದಿನ ಗೋವಿನ ಸಗಣಿಯಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಅವುಗಳ ಮೇಲೆ ಚೆಂಡು ಹೂವುಗಳನ್ನು ಇಟ್ಟು ಅಲಂಕರಿಸಿ ಅದರ ಮೇಲೆ ದೀಪವನ್ನು ಹಚ್ಚುವುದು ಸಂಪ್ರದಾಯ. ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ದೀಪಾವಳಿಯಿಂದ ಕಾರ್ತಿಕ ಮಾಸದ ಪರ್ಯಂತ ಎಲ್ಲ ದೇವಾಲಯಗಳಲ್ಲಿ ಕೆರಕನ ಉಂಡೆ ಮಾಡಿ ಅದರ ಮೇಲೆ ದೀಪ ಹಚ್ಚುವುದು ಇಲ್ಲಿನ ವಿಶೇಷ. ದೀಪಾವಳಿಯಿಂದ ಕಾರ್ತಿಕ ಮಾಸದ ಕೊನೆಯವರೆಗೆ ಕೆರಕನ ಉಂಡೆಗಳನ್ನು ಮಾಡಿ ದೀಪ ಹಚ್ಚುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.