ಜಲಧಿಹಳ್ಳಿಯಲ್ಲಿ ಜಟಿಲವಾದ ನಿವೇಶನ ಹಂಚಿಕೆ Complex Site Allotment in Jaladhihalli

 ಅಜ್ಜಂಪುರ ತಾಲೂಕಿನ ಜಲಧಿಹಳ್ಳಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಿರುವ ಜಾಗ.
ಅಜ್ಜಂಪುರ ತಾಲೂಕಿನ ಜಲಧಿಹಳ್ಳಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಿರುವ ಜಾಗ.
Published on: 

ಬಿ.ಉಮೇಶ್‌ನಾಯ್ಕ ತರೀಕೆರೆ

ಅಜ್ಜಂಪುರ ತಾಲೂಕಿನ ಜಲಧಿಹಳ್ಳಿ ಸ.ನಂ 6ರಲ್ಲಿ ಆಶ್ರಯ ಯೋಜನೆಯಡಿ ಹಂಚಿಕೆಯಾದ ನಿವೇಶನದಲ್ಲಿ ಸ್ವಂತ ಸೂರು ಕಟ್ಟಿಕೊಂಡು ನೆಮ್ಮದಿಯ ಬದುಕು ಸಾಗಿಸುವ ಭರವಸೆಯಲ್ಲಿದ್ದ ಬಡ ಜನತೆಯ ದಶಕಗಳ ಕನಸು ನನಸಾಗದೆ ಉಳಿದಿದೆ.

2004ನೇ ಸಾಲಿನಲ್ಲಿ ಅಂದಿನ ಆಶ್ರಯ ವಸತಿ ಸಮಿತಿ ಖುದ್ದು ಸ್ಥಳ ಪರಿಶೀಲಿಸಿ ನಿವೇಶನರಹಿತರ ಸಮಸ್ಯೆ ಆಲಿಸಿ 3.10 ಎಕರೆಯಷ್ಟು ಜಾಗ ಕಾಯ್ದಿರಿಸಿ ಅಲ್ಲಿನ 44 ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಅವೈಜ್ಞಾನಿಕವಾಗಿ ಹಂಚಿಕೆ ಮಾಡಿದ ನಿವೇಶನಗಳು ಇದೀಗ ಸಾರ್ವಜನಿಕವಾಗಿ ಸೃಷ್ಟಿಯಾಗಿರುವ ತಗಾದೆ ಜತೆ ಸಕ್ಷಮ ಅಧಿಕಾರಿಗಳು ನಂತರದ ಪ್ರಕ್ರಿಯೆ ಸಕ್ರಿಯಗೊಳಿಸದ ಕಾರಣ ಕಾನೂನು ಬದ್ಧವಾಗಿ ದಕ್ಕುವುದು ಅನುಮಾನವಾಗಿದೆ.

ಆಗಿನಿಂದಲೂ ಸಕ್ಷಮ ಅಧಿಕಾರಿಗಳು ಬಹುತೇಕ ನಿವೇಶನ ಹಂಚಿಕೆಯಲ್ಲಿನ ಲೋಪ ಸರಿಪಡಿಸಲು ಮೀನಮೇಷ ಎಣಿಸುತ್ತಿರುವುದರಿಂದ ಬಡ ಜನತೆಯ ಪರಿಸ್ಥಿತಿ ಡೋಲಾಯಮಾನವಷ್ಟೇ ಅಲ್ಲ, ಹಕ್ಕುಪತ್ರದಲ್ಲಿ ನಮೂದಿಸದ ನಿವೇಶನದ ಸಂಖ್ಯೆ, ಅಳತೆ ಗೊಂದಲ ನಿವಾರಣೆಗಾಗಿ ಕಚೇರಿಗೆ ಅಲೆದು ಹೈರಾಣಾಗುವಂತಾಗಿದೆ.

22 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಹಂಚಿಕೆಯಾಗಿರುವ ನಿವೇಶನದ ಹಕ್ಕುಪತ್ರವಿದ್ದರೂ, ಜಾಗ ಖಾತ್ರಿಯಾಗದ ಪರಿಣಾಮ ಸ್ವಂತ ಮನೆ ನಿರ್ಮಿಸಿಕೊಳ್ಳಲು ಪರದಾಡುತ್ತಿರುವ ಕೆಲ ನಿವೇಶನರಹಿತರು ಈಗಲೂ ಪಿತ್ರಾರ್ಜಿತವಾಗಿ ಪಾಲಿಗೆ ಬಂದ ಸಣ್ಣಸಣ್ಣ ಕೋಣೆಯಲ್ಲೇ ವಾಸಿಸುವ ದುಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ನಿವೇಶನ ಹಂಚಿಕೆ ಮಾಡಿದ ಸಕ್ಷಮ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು.

ಆಶ್ರಯ ಯೋಜನೆಯಡಿ ಜಲಧಿಹಳ್ಳಿ ನಿವೇಶನರಹಿತರಿಗೆ ಜಾಗ ಹಂಚಿಕೆ ಮಾಡುವ ನಿರ್ಧಾರ ಬಡ ಜನರ ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿತ್ತೇ ಎನ್ನುವ ಪ್ರಶ್ನೆ ಮೂಡಿದೆ. ತರಾತುರಿಯಲ್ಲಿ ಹಂಚಿಕೆ ಮಾಡಿದ ಬಹುತೇಕ ನಿವೇಶನಗಳ ಹಕ್ಕುಪತ್ರಗಳಲ್ಲಿ ಸ್ಪಷ್ಟವಾಗಿ ಅಳತೆ ನಮೂದಿಸದಿರುವುದು, ಸೂಕ್ತ ನಕ್ಷೆ ತಯಾರಿಸದಿರುವುದು ಇದೀಗ ಉದ್ಭವಿಸಿರುವ ಪ್ರಶ್ನೆಗೆ ಪುಷ್ಟಿ ನೀಡುವಂತಿದೆ. ಈ ಗೊಂದಲದಿಂದಲೇ ಗ್ರಾಪಂನಿಂದ ಇ-ಸ್ವತ್ತು ಸಹ ಸಿಗದಂತಾಗಿದೆ.

ಜಲಧಿಹಳ್ಳಿ ಸ.ನಂ 6ರಲ್ಲಿನ 3.10 ಎಕರೆ ಜಾಗದಲ್ಲಿ 44 ಬಡ ಕುಟುಂಬಗಳಿಗೆ ಅವೈಜ್ಞಾನಿಕವಾಗಿ ನಿವೇಶನ ಹಂಚಿಕೆ ಮಾಡಿದ್ದರೂ, ಆಯಾ ನಿವೇಶನಗಳಿಗೆ ಯೋಜನೆ ಅನುಸಾರ ಸಂಖ್ಯೆ ನೀಡಿಲ್ಲ. ನಿವೇಶನಕ್ಕಾಗಿ ಮಂಜೂರಾದ 3.10 ಎಕರೆ ಪೈಕಿ ಬಹಳಷ್ಟು ಜಾಗ ಹಂಚಿಕೆ ಮುಂಚೆಯೇ ಪ್ರಭಾವಿಗಳಿಂದ ಮಾತ್ರವಲ್ಲ, ಸರ್ಕಾರಿ ಶಾಲೆಯಿಂದಲೂ ಅತಿಕ್ರಮಣವಾಗಿದೆ. ಹಾಗಾಗಿ ಅಶಕ್ತ ಜನ ಒತ್ತುವರಿಯಾದ ಜಾಗದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಆಶ್ರಯ ಸಮಿತಿಯ ಕೊಟ್ಟು ಕಿತ್ತುಕೊಳ್ಳುವ ಧೋರಣೆಗೆ ಛೀಮಾರಿ ಹಾಕುವಂತಾಗಿದೆ.

ಜಲಧಿಹಳ್ಳಿಯಲ್ಲಿ ಸಮಸ್ಯೆ ತಂದೊಡ್ಡಿರುವ ನಿವೇಶನದ ಜಾಗವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹದ್ದುಬಸ್ತು ಮಾಡಿ ಮರು ಹಂಚಿಕೆ ಮಾಡಬೇಕೆಂಬ ಬೇಡಿಕೆ ಬಹಳಷ್ಟು ದಿನಗಳಿಂದ ಕೇಳಿಬರುತ್ತಿದ್ದರೂ ಒತ್ತಡಕ್ಕೆ ಮಣಿದು ಮೂಕ ಪ್ರೇಕ್ಷಕರಂತೆ ನಟಿಸುತ್ತಿರುವ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳುವ ಮನಸ್ಸು ಮಾಡುತ್ತಿಲ್ಲ ಎಂಬ ಅನುಮಾನ ಫಲಾನುಭವಿಗಳಲ್ಲಿದೆ.

ಚಿಕ್ಕಾನವಂಗಲ ಗ್ರಾಪಂ ಅಸೆಸ್‌ಮೆಂಟ್ ದಾಖಲೆಯಲ್ಲಿ 44 ನಿವೇಶನದ ಆಸ್ತಿ ವಿವರ ಸೇರ್ಪಡೆಗೊಳಿಸಿದ್ದರೂ ಸ್ವತ್ತಿಗೆ ನಿರ್ದಿಷ್ಟ ಕಂದಾಯ ನಿಗದಿ ಮಾಡಿಲ್ಲ. ಹಂಚಿಕೆಯಾದ ಜಾಗದಲ್ಲಿ ಜಲಜೀವನ್ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಇಬ್ಬರು ಸರ್ಕಾರದ ವಸತಿ ಯೋಜನೆಯಡಿ 2.25 ಲಕ್ಷ ರೂಪಾಯಿ ಸಹಾಯಧನ ಪಡೆದು, ಮತ್ತಿಬ್ಬರು ಸ್ವಂತ ಖರ್ಚಿನಿಂದ ಮನೆ ನಿರ್ಮಿಸಿ ವಿವಿಧ ಸೌಲಭ್ಯ ಕಲ್ಪಿಸಿಕೊಂಡಿದ್ದಾರೆ. ಉಳಿದಂತೆ ಗ್ರಾಪಂನಿಂದ ಲಭ್ಯಗೊಳಿಸಬಹುದಾದ ರಸ್ತೆ, ವಿದ್ಯುತ್ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದಾರೆ. ಆದರೂ ಗ್ರಾಪಂ ಕಂದಾಯ ನಿಗದಿ ಮಾಡದ ಕ್ರಮದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.