

ಮೂಡಿಗೆರೆ: ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಸ್ಥಳೀಯವಾಗಿ ಒದಗಿಸುವ ಉದ್ದೇಶದಿಂದ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಗೌಡಹಳ್ಳಿಯಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗುಣಮಟ್ಟ ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಕೇಂದ್ರ ಆರಂಭವಾದ ಬಳಿಕ ಸಾರ್ವಜನಿಕರು ಇದರ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗಳು ಎದುರಾದಾಗ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು. ನಂತರ ದೇವವೃಂದ ಗ್ರಾಮಕ್ಕೆ ತೆರಳಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶಿಶಿಲ-ಬೈರಾಪುರ ಹೊಸ ರಸ್ತೆ ನಿರ್ಮಾಣದ ಕುರಿತು ಸ್ಥಳೀಯರು ಶಾಸಕಿ ನಯನಾ ಮೋಟಮ್ಮ ಅವರ ಗಮನ ಸೆಳೆದರು. ಇದಕ್ಕೆ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯಿಸಿ, ರಸ್ತೆ ನಿರ್ಮಾಣಕ್ಕೆ ನನ್ನ ಸಹಮತವಿದೆ. ಮಳೆಗಾಲದಲ್ಲಿ ಚಾರ್ಮಾಡಿ ಹಾಗೂ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ ಬಂದ್ ಆಗುವ ಸಂದರ್ಭದಲ್ಲಿ ಕರಾವಳಿ ಪ್ರದೇಶಕ್ಕೆ ತೆರಳಲು ಈ ರಸ್ತೆ ಅನುಕೂಲವಾಗಲಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಸ್ಥಿತಿ ಪರಿಶೀಲಿಸಿದ್ದಾರೆ. ಈ ಕುರಿತು ಅರಣ್ಯ ಸಚಿವರೊಂದಿಗೆ ಚರ್ಚಿಸಿ, ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಗೊಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜಿ.ಸುಬ್ರಾಯ ಗೌಡ ಮಾತನಾಡಿ, ದೇವವೃಂದ ಗ್ರಾಮ ಮೂಡಿಗೆರೆ ಮತ್ತು ಸಕಲೇಶಪುರ ಗಡಿ ಭಾಗವಾಗಿದ್ದರಿಂದ ಇಲ್ಲಿಗೆ ಅನುದಾನ ಸಿಗದೆ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಶಾಸಕರು ಮುತುವರ್ಜಿ ವಹಿಸಿ, ಲೋಕೋಪಯೋಗಿ ಸಚಿವರ ಗಮನ ಸೆಳೆದು 9 ಕೋಟಿ ರೂ. ಅನುದಾನ ತಂದಿದ್ದಾರೆ. ಇದರಿಂದ ದೇವವೃಂದ ರಸ್ತೆ, ಸೇತುವೆ ಹಾಗೂ ಕಾಲನಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಪಪಂ ಮಾಜಿ ಉಪಾಧ್ಯಕ್ಷ ಹೊಸಕೆರೆ ರಮೇಶ್, ಗೌಡಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ದಿವಾಕರ್, ಗ್ರಾಪಂ ಮಾಜಿ ಸದಸ್ಯರಾದ ಅಭಿಷೇಕ್, ಸುಚಿತ್ರಾ ಪ್ರಸನ್ನ, ಮುಖಂಡರಾದ ನಿಶಾಂತ್ ಪಟೇಲ್, ಚಂದ್ರೇಗೌಡ, ಸುಬ್ಬಣ್ಣ ಇತರರಿದ್ದರು.