ಗಿರಿಜಾಕಲ್ಯಾಣ ಮಹೋತ್ಸವಕ್ಕೆ ಚಾಲನೆ Sri Kalasheshwara Swamy

Sri Kalasheshwara Swamy
ಕಳಸ ಕಲಶೇಶ್ವರ ಸ್ವಾಮಿಯವರ ಕನ್ಯಾ ನಿಶ್ಚಯದ ಮೊದಲು ದೇವರಿಗೆ ಪೂಜೆ ನಡೆಯುತ್ತಿರುವುದು.
ಕಳಸ ಕಲಶೇಶ್ವರ ಸ್ವಾಮಿಯವರ ಕನ್ಯಾ ನಿಶ್ಚಯದ ಮೊದಲು ದೇವರಿಗೆ ಪೂಜೆ ನಡೆಯುತ್ತಿರುವುದು.
Published on: 

ಕಳಸ: ಶ್ರೀ ಕಲಶೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಕನ್ಯಾ ನಿಶ್ಚಯ ಕಾರ್ಯಕ್ರಮ ಭಾನುವಾರ ರಾತ್ರಿ ವಿಧಿವಿಧಾನಗಳೊಂದಿಗೆ ನೆರವೇರಿತು.

ಶ್ರೀ ಕಲಶೇಶ್ವರ ಸ್ವಾಮಿ ಹಾಗೂ ಶ್ರೀ ಗಿರಿಜಾಂಬೆಯ ಕಲ್ಯಾಣೋತ್ಸವಕ್ಕೆ ಮುನ್ನುಡಿಯಾಗಿ ನಡೆಯುವ ಈ ಕನ್ಯಾನಿಶ್ಚಯ ಶಾಸ್ತ್ರವು ಕ್ಷೇತ್ರದ ಪುರಾತನ ಸಂಪ್ರದಾಯ, ಆಗಮ ಪದ್ಧತಿ ಹಾಗೂ ಧಾರ್ಮಿಕ ಆಚರಣೆಗಳ ಸೊಗಡನ್ನು ಅನಾವರಣಗೊಳಿಸಿತು. ದೇವಾಲಯದ ಅರ್ಚಕರು, ಶಾಂತ್ರಿಗಳು, ಅಡಿಗಳು, ವಿಪ್ರರು ಹಾಗೂ ದೇವಾಲಯದ ಸಿಬ್ಬಂದಿ ವಿವಿಧ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು. ರಾತ್ರಿ ಬಲಿ ಪ್ರಧಾನ ಹೋಮದೊಂದಿಗೆ ಕಾರ್ಯಕ್ರಮದ ಧಾರ್ಮಿಕ ಕಾರ್ಯಗಳು ಆರಂಭಗೊಂಡವು. ಬಳಿಕ ಜಾಗಟೆ ಮತ್ತು ಹಳಗ ಪೂಜೆಯನ್ನು ಒಳಗೊಂಡ ಘನಪೂಜೆ ನೆರವೇರಿತು. ನಂತರ ಶ್ರೀ ಕಲಶೇಶ್ವರ ಸ್ವಾಮಿಗೆ ಕಲಶಾಭಿಷೇಕ ಹಾಗೂ ಮಂಗಳಾರತಿ ಸಮರ್ಪಿಸಲಾಯಿತು.

ಗಿರಿಜಾ ಕಲ್ಯಾಣೋತ್ಸವದ ಪ್ರಮುಖ ಧಾರ್ಮಿಕ ವಿಧಾನಗಳಲ್ಲಿ ಒಂದಾದ ಕನ್ಯಾ ನಿಶ್ಚಯ ಶಾಸ್ತ್ರವು ವಿಶೇಷವಾಗಿ ನೆರವೇರಿತು. ಈ ಶಾಸ್ತ್ರಕ್ಕಾಗಿ ಅರಿಶಿನ, ಕುಂಕುಮ ಸೇರಿದಂತೆ ವಿವಿಧ ಮಂಗಳದ್ರವ್ಯಗಳನ್ನು ಒಳಗೊಂಡ ಉಂಬುಳಡಿಕೆ ಹರಿವಾಣವನ್ನು ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಇರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಹೂವು ಹಾಗೂ ಮಂತ್ರಾಕ್ಷತೆ ಸಮರ್ಪಿಸಿದ ಬಳಿಕ, ಸಂಪ್ರದಾಯದಂತೆ ಹಿಮ್ಮುಖವಾಗಿ ಒಳಗಿನಿಂದ ಉಂಬುಳಡಿಕೆ ಹರಿವಾಣವನ್ನು ತೆಗೆದುಕೊಂಡು ಬಂದು ಚಕ್ರಕಲ್ಲಿನ ಮೇಲೆ ಇರಿಸಿದರು. ನಂತರ ಬೊಕ್ಕಸದವರು ದಿಬ್ಬಣದೊಂದಿಗೆ ಈ ಮಂಗಳದ್ರವ್ಯಗಳ ಹರಿವಾಣವನ್ನು ವಾದ್ಯಘೋಷಗಳ ನಡುವೆ ಪಲ್ಲಕ್ಕಿಯಲ್ಲಿ ಹೊತ್ತು ಶ್ರೀ ಗಿರಿಜಾಂಬೆಯವರ ದೇವಸ್ಥಾನಕ್ಕೆ ಕೊಂಡೊಯ್ದರು.