ಕ್ರೀಡಾಕೂಟಗಳಿಂದ ಸಾಮರಸ್ಯ ವೃದ್ಧಿ

ಕರ್ಕೇಶ್ವರ ಕೈಮರದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಡಿ.ಎನ್.ಜೀವರಾಜ್, ನಾಗರಾಜ್ ವಾಲ್ಮೀಕಿ, ಎಸ್.ಪ್ರಕಾಶ್, ರಾಜೇಶ್ ಕೇಶವತ್ತಿ ಇದ್ದರು.
ಕರ್ಕೇಶ್ವರ ಕೈಮರದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಡಿ.ಎನ್.ಜೀವರಾಜ್, ನಾಗರಾಜ್ ವಾಲ್ಮೀಕಿ, ಎಸ್.ಪ್ರಕಾಶ್, ರಾಜೇಶ್ ಕೇಶವತ್ತಿ ಇದ್ದರು.
Published on: 

ಬಾಳೆಹೊನ್ನೂರು: ಕ್ರೀಡಾಕೂಟಗಳಿಂದ ಸಾಮರಸ್ಯ, ಸದ್ಭಾವನೆ ಸಾಧಿಸಲು ಸಾಧ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕರ್ಕೇಶ್ವರ ಕೈಮರದ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಹಾಗೂ ಗೆಳೆಯರ ಬಳಗ ಶರನ್ನವರಾತ್ರಿ ಹಾಗೂ ದಸರಾ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕ್ರೀಡೆಯಲ್ಲಿ ಸತತವಾಗಿ ತೊಡಗಿಸಿಕೊಂಡರೆ ಮಾನಸಿಕ ನೆಮ್ಮದಿ ದೊರೆಯಲಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಸ್ನೇಹ, ಸಾಮರಸ್ಯ ಬೆಳೆಯುತ್ತದೆ ಎಂದರು.

ಕೇಂದ್ರ ಸರ್ಕಾರ ಸಂಸದರಿಗೆ ನಿಗದಿತ ಮೊತ್ತದ ಅನುದಾನ ನೀಡುತ್ತಿದ್ದು ಇದರಿಂದ ಪೂರ್ಣವಾಗಿ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಬೇರೆ ಬೇರೆ ಯೋಜನೆಗಳ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಆದ್ಯತೆ ಮೇರೆಗೆ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಕುರಿತು ದೂರುಗಳಿವೆ. ಹಲವು ಗ್ರಾಮಗಳಿಗೆ ಪೈಪ್‌ಲೈನ್ ಮಾಡಲಾಗಿದೆ. ಆದರೆ ಆ ಲೈನ್‌ಗೆ ನೀರು ಎಲ್ಲಿಂದ ಸಂಪರ್ಕ ಕಲ್ಪಿಸಬೇಕು ಎಂಬುದು ಗುತ್ತಿಗೆದಾರರು, ಇಂಜಿನಿಯರ್‌ಗಳಿಗೆ ಗೊತ್ತಿಲ್ಲ. ಇದರಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾಮಗಾರಿ ಸರಿಯಾಗಿ ನಿರ್ವಹಿಸದ ಕಡೆಗಳಲ್ಲಿ ಇಂಜಿನಿಯರ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವ ಬಗ್ಗೆ ಸಂಬಂಧಿಸಿದ ಇಲಾಖೆಗೆ ಶಿಫಾರಸು ಸಹ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇಂಜಿನಿಯರ್‌ಗಳು ಇದು ನಮ್ಮ ತಪ್ಪಲ್ಲ. ಅವಸರದಿಂದ ಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆ. ಇದನ್ನು ಸರಿಪಡಿಸಲಾಗುವುದೆಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಕರ್ಕೇಶ್ವರ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ, ರುದ್ರಭೂಮಿ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಂಸದರಿಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್, ಚಾಮುಂಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ನಾಗರಾಜ್ ವಾಲ್ಮೀಕಿ, ಕಾರ್ಯದರ್ಶಿ ಎಸ್.ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ರಾಜೇಶ್ ಕೇಶವತ್ತಿ, ಪ್ರಮುಖರಾದ ಎಂ.ಆರ್.ದಿನಕರ್, ಪ್ರದೀಪ್ ಕಿಚ್ಚಬ್ಬಿ, ನೀಲೇಶ್, ವಿವೇಕ್, ಸುಚಿತಾ ಹೆಗ್ಡೆ, ರಾಮಚಂದ್ರ ಭಟ್, ಸತೀಶ್ ಕೇಶವತ್ತಿ, ಎಂ.ನಾರಾಯಣ ಪೂಜಾರಿ, ಪ್ರಕಾಶ್ ಕೈಮರ, ಜೈಪಾಲ್ ಗುಬ್ಬೂರು, ಕೃಷ್ಣಮೂರ್ತಿ ಅಡ್ಡೋಣಿ, ಮಾಲತೇಶ್ ಕೈಮರ, ಕುಮಾರ, ವಿಜಯ, ರಾಜೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net