ಕಾನೂನು ಪ್ರಕಾರ ಎಲ್ಲರೂ ಸಮಾನರು Everyone is equal before the law

ಮೂಡಿಗೆರೆ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶೆ ಕೆ.ಕೆ.ಸುರಕ್ಷಾ ಉದ್ಘಾಟಿಸಿದರು. ಪ್ರಾಚಾರ್ಯ ಪೂರ್ಣೇಶ್, ಕೃಷ್ಣಮೂರ್ತಿ ರಾಜೆ ಅರಸ್, ಕೆ.ಎಸ್.ಅರ್ಪಿತಾ ಇತರರಿದ್ದರು.
ಮೂಡಿಗೆರೆ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶೆ ಕೆ.ಕೆ.ಸುರಕ್ಷಾ ಉದ್ಘಾಟಿಸಿದರು. ಪ್ರಾಚಾರ್ಯ ಪೂರ್ಣೇಶ್, ಕೃಷ್ಣಮೂರ್ತಿ ರಾಜೆ ಅರಸ್, ಕೆ.ಎಸ್.ಅರ್ಪಿತಾ ಇತರರಿದ್ದರು.
Published on: 

ಮೂಡಿಗೆರೆ: ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕೆಂದರೆ ಗುಣಾತ್ಮಕ ಶಿಕ್ಷಣ ಪಡೆಯುವ ಮೂಲಕ ಕಾನೂನನ್ನು ಸರಿಯಾಗಿ ಅರಿತುಕೊಳ್ಳಬೇಕು ಎಂದು ಜೆಎಂಎಫ್‌ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕೆ.ಕೆ.ಸುರಕ್ಷಾ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿಯಿಂದ ಸುರಕ್ಷಿತ ಬಾಲ್ಯ ಅಭಿಯಾನ ಅಂಗವಾಗಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರೂ ಕಾನೂನಿಗೆ ಬದ್ಧರಾಗಿರಬೇಕು. ಕಾನೂನು ಮೀರಿ ಯಾವುದೇ ರೀತಿಯ ಚಟುವಟಿಕೆ ನಡೆಸಬಾರದು. ನಮ್ಮಿಂದ ಯಾವುದೇ ರೀತಿಯ ಅಪರಾಧವಾಗಬಾರದು ಎಂದರೆ ಮೊದಲು ನಾವು ಕಾನೂನನ್ನು ತಿಳಿದುಕೊಳ್ಳಬೇಕು. ಕಾನೂನು ಚೌಕಟ್ಟಿನಲ್ಲಿ ಮುಂದುವರಿದಾಗ ಮಾತ್ರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ತಿಳಿಸಿದರು.

ಜ್ಞಾನ ಬದುಕಿನ ದೊಡ್ಡ ಆಸ್ತಿ. ಉತ್ತಮ ಜ್ಞಾನ ಸಂಪಾದನೆ ಮಾಡಿದವರಿಗೆ ಜಗತ್ತಿನಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಲು ಶ್ರಮಪಡಬೇಕು. ವಿದ್ಯಾರ್ಥಿಗಳ ಬಾಲ್ಯದ ದಿನಗಳು ಉತ್ತಮ ಅನುಭವದೊಂದಿಗೆ ಕಳೆಯಬೇಕೇ ಹೊರತು ಕೆಟ್ಟ ಅನುಭವಗಳಿಂದಲ್ಲ. ಬಾಲ್ಯದಿಂದಲೇ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಮಕ್ಕಳನ್ನು ದುಡಿಮೆಗೆ ಕಳಿಸದೆ ಅವರಿಗೆ ಶಿಕ್ಷಣ ನೀಡಿ ಪಾಲಕರು ಜವಾಬ್ದಾರಿ ನಿಭಾಯಿಸಬೇಕು ಎಂದರು.

ಪ್ರಸ್ತುತ ಸಂದರ್ಭದಲ್ಲಿ ಮಕ್ಕಳನ್ನು ಸಂರಕ್ಷಣೆ ಮಾಡಬೇಕಾದವರಿಂದಲೇ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ವಕೀಲ ಕೆ.ವಿಶಾಲಾ ನಾಗರಾಜ್ ಮಾತನಾಡಿ, ಪೋಕ್ಸೋ ಕಾಯ್ದೆ ಹೆಣ್ಣು ಮಕ್ಕಳಿಗೆ ಸೀಮಿತವಾಗಿಲ್ಲ. ದೌರ್ಜನ್ಯಕ್ಕೊಳಗಾಗುವ ಗಂಡು ಮಕ್ಕಳೂ ಪೋಕ್ಸೋ ಕಾಯ್ದೆಯಲ್ಲಿ ನ್ಯಾಯ ಪಡೆಯಬಹುದು. ಮಕ್ಕಳ ಮೇಲೆ ದೌರ್ಜನ್ಯ ನಡೆಯುವ ಕೃತ್ಯ ಕಂಡುಬಂದರೆ ಕೂಡಲೆ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಪೂರ್ಣೇಶ್, ವಕೀಲರ ಸಂಘದ ಕಾರ್ಯದರ್ಶಿ ಕೆ.ಎಸ್.ಅರ್ಪಿತಾ, ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ರಾಜೆ ಅರಸ್, ಕರಿಯಪ್ಪ ಇತರರಿದ್ದರು.