

ಶೃಂಗೇರಿ: ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಒಂದು ವರ್ಷದ ಕಾಲಾವಕಾಶ ಕೇಳಿದ್ದು ಕೇಂದ್ರದಿಂದ ಅದಕ್ಕೆ ಅವಕಾಶ ನೀಡಬೇಕು. ಅರಣ್ಯಭೂಮಿ ಮಾತ್ರ ಪರಿಸರ ಸೂಕ್ಷ್ಮವಲಯಕ್ಕೆ ಸೇರಿಸಬೇಕು. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯಾವುದೇ ತಡೆ ಉಂಟು ಮಾಡಬಾರದು. ಬಫರ್‌ಜೋನ್‌ಮುಕ್ತ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ರೈತರು ಆಗ್ರಹಿಸಿದರು.
ಮಲೆನಾಡು ನಾಗರಿಕ ಹಿತರಕ್ಷಣಾ ಸಮಿತಿಯಿಂದ ಆಯೋಜಿಸಿದ್ದ ಮಲೆನಾಡಿನ ಬದುಕು-ಸಮಸ್ಯೆ-ಪರಿಹಾರ ಕುರಿತ ಸಂವಾದದಲ್ಲಿ ತಾಲೂಕಿನ ಸಮಸ್ಯೆಗಳ ಕುರಿತು ವಿವರ ನೀಡಿದರು.
ಕಸ್ತೂರಿ ರಂಗನ್ ವರದಿ ಅಪಾಯಗಳು ಹಾಗೂ ಪರಿಹಾರಗಳು, ಕೆರೆಕಟ್ಟೆ ಅಭಯಾರಣ್ಯ ಸಂತ್ರಸ್ತರ ಸಮಸ್ಯೆ ಪರಿಹಾರ, ಬಗೆಹರಿಯದ ಭದ್ರಾ ಅಭಯಾರಣ್ಯ ಸಂತ್ರಸ್ತರ ಸಮಸ್ಯೆ, ರೈಲೈ ಬ್ಯಾರಿಕೇಡ್ ನಿರ್ಮಾಣಕ್ಕೆ ಬಫರ್ ಜೋನ್ ಕಾರಣ ಹೇಳಿ ಅರಣ್ಯ ಇಲಾಖೆಯಿಂದ ಅಡ್ಡಿ, ಅಡಿಕೆ ಬೆಳೆಗಾರರ ಸಮಸ್ಯೆಗಳು, ಜಂಟಿ ಸರ್ವೇಯಲ್ಲಿ ಆಗುತ್ತಿರುವ ಲೋಪಗಳು ಹೀಗೆ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಿದರು.
ಮಲೆನಾಡಿನ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮನ್ವಯದ ಮುಖಾಂತರ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಮಿತಿಯ ರತ್ನಾಕರ್ ಗಡಿಗೇಶ್ವರ, ಅಭಿಷೇಕ್, ರೈತಮುಖಂಡರಾದ ತಲವಾನೆ ಪ್ರಕಾಶ್, ಅಂಬ್ಲೂರು ರಾಮಕೃಷ್ಣ, ಗೇರುಬೈಲು ಶಂಕರಪ್ಪ, ಚಂದ್ರಶೇಖರ್, ನೂತನ್ ಸೂರ್ಯ, ಆದೇಶ, ರಾಘವೇಂದ್ರ ಹಂಚಲಿ ಇತರರಿದ್ದರು.